

ನವದೆಹಲಿ: ಆಧಾರ್ ಗೆ ಸುಪ್ರೀಂಕೋರ್ಟ್ ಸಂವಿಧಾನಿಕ ಮಾನ್ಯತೆ ನೀಡಿದ ನಂತರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಯುಪಿಎ ಅಧಿಕಾರದ ಅವಧಿಯಲ್ಲಿ ಆಧಾರ್ ನಿರಾಧಾರ್ ಆಗಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಆಧಾರ್ ಗೆ ಯಾವುದೇ ಗೊತ್ತು ಗುರಿ ಇರಲಿಲ್ಲ. ಯಾವುದೇ ಕಾನೂನು ಪರಿಶೀಲಿಸದೆ ಜನರನ್ನು ನೋಂದಣಿ ಮಾಡಿಸಲು ಯುಪಿಎ ಸರ್ಕಾರ ಕೊಟ್ಯಂತರ ರೂಪಾಯಿ ವೆಚ್ಚ ಮಾಡಿತ್ತು ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಧಾರ್ ಗೆ ಸದೃಢ ಕಾನೂನಿನ ಬೆಂಬಲ ಒದಗಿಸಿದ್ದು, ಸುಪ್ರೀಂಕೋರ್ಟ್ ತೀರ್ಪಿನ ನಂತರ ಕಾಂಗ್ರೆಸ್ ಪಕ್ಷ ಸೋಲಿನ ನಿಲುವನ್ನು ಪ್ರದರ್ಶಿಸುತ್ತಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಭ್ರಷ್ಟಾಚಾರದ ಮುಖದಂತಿದ್ದು, ಏನೆಲ್ಲಾ ಕಸರತ್ತು ಮಾಡಿದ್ದರೂ ಆಧಾರ್ ವಿಷಯದಲ್ಲಿ ಕಾನೂನಾತ್ಮಕ ಹಾಗೂ ರಾಜಕೀಯತ್ಮಕವಾಗಿ ಸೋತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಆಧಾರ್ ಕಾರ್ಡ್ ನ್ನು ಮೊಬೈಲ್ ಪೋನ್ ಹಾಗೂ ಬ್ಯಾಂಕ್ ಖಾತೆಗಳಿಗೆ ಜೋಡಿಸುವುದು ಕಡ್ಡಾಯವಲ್ಲ, ಆದರೆ, ಇದು ಪ್ಯಾನ್ ಕಾರ್ಡ್ ಗೆ ಕಡ್ಡಾಯ ಎಂದು ಸುಪ್ರೀಂಕೋರ್ಟ್ ಬೆಳಗ್ಗೆ ತೀರ್ಪು ನೀಡಿತ್ತು.