ಬೀಜಿಂಗ್: ರಷ್ಯಾದಿಂದ ಅಭಿವೃದ್ಧಿಪಡಿಸಲಾಗಿರುವ ಅತ್ಯಾಧುನಿಕ 5 ನೇ ತಲೆಮಾರಿನ ಸುಖೋಯ್ ಎಸ್ ಯು-57 ಜೆಟ್ ನ್ನು ಖರೀದಿಸಲು ಚೀನಾ ಚಿಂತನೆ ನಡೆಸಿದೆ.
ಈ ನಡುವೆ ರಷ್ಯಾ ಅದೇ ಮಾದರಿಯ ಫೈಟರ್ ಜೆಟ್ ಗಳನ್ನು ಭಾರತಕ್ಕೆ ನೀಡುವುದಕ್ಕೂ ಉತ್ಸಾಹ ತೋರಿದೆ.
ಬಹು ಉಪಯೋಗಿ 5 ನೇ ತಲೆಮಾರಿನ ಸುಖೋಯ್ ಎಸ್ ಯು-57 ಜೆಟ್ ವೈಮಾನಿಕ ಯುದ್ಧದ ಜೊತೆಗೆ ನೌಕಾ ಪಡೆಯ ಟಾರ್ಗೆಟ್ ಹಾಗೂ ಭೂಸೇನೆಯ ಟಾರ್ಗೆಟ್ ಗಳ ಮೇಲೂ ಆಕ್ರಮಣ ಮಾಡುವ ಸಮಾರ್ಥ್ಯ ಹೊಂದಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜಗತ್ತಿನ ಅತ್ಯಂತ ಬಲಿಷ್ಠ ಯುದ್ಧ ವಿಮಾನ ಎಂದು ಹೇಳಿದ್ದರು.
ರಷ್ಯಾದ ರಕ್ಷಣಾ ಕೈಗಾರಿಕಾ ಸಂಸ್ಥೆಯಲ್ಲಿನ ಅಂತಾರಾಷ್ಟ್ರೀಯ ಸಹಕಾರ ಹಾಗೂ ಪ್ರಾದೇಶಿಕ ನೀತಿ ವಿಭಾಗದ ನಿರ್ದೇಶಕ ವಿಕ್ಟರ್ ಕ್ಲಾಡೊವ್, ಭಾರತ ಹಾಗೂ ಚೀನಾವನ್ನು ಸುಖೋಯ್ ಎಸ್ ಯು-57 ಜೆಟ್ ಗೆ ಸಮರ್ಥ ಖರೀದಿದಾರರು ಎಂದು ಹೇಳಿದ್ದಾರೆ.
ಫ್ರಾನ್ಸ್ ನಿಂದ ರಾಫೆಲ್ ಖರೀದಿಸುತ್ತಿರುವ ಭಾರತ ತನ್ನ ವಾಯುಪಡೆಯ ಸಾಮರ್ಥ್ಯವನ್ನು ಹೆಚ್ಚಿಕೊಳ್ಳಲು ಮುಂದಾಗಿದೆ. ಈ ನಡುವೆಯೇ ರಷ್ಯಾ ತನ್ನ ಅತ್ಯಾಧುನಿಕ ಎಸ್ ಯು 35 ನ್ನು ಮಾರಾಟ ಮಾಡಲು ಉತ್ಸುಕವಾಗಿದೆ.