

ನವದೆಹಲಿ/ ತುಂಡ್ಲಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿ ಉದ್ಘಾಟಿಸಿದ್ದ ಭಾರತದ ಮೊದಲ ಸೆಮಿ ಅತಿ ವೇಗದ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ಶನಿವಾರ ಮುಂಜಾನೆ ಕೆಲವು ತಾಂತ್ರಿಕ ದೋಷ ಕಂಡುಬಂದಿದೆ.
ಚಕ್ರಗಳು ಜಾರಿದ್ದರಿಂದ ಸಂಚಾರದಲ್ಲಿ ವ್ಯತ್ಯಯವುಂಟಾಗಿದ್ದು ಎಂಜಿನಿಯರ್ ಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಾರಣಾಸಿಯಿಂದ ರೈಲು ಬರುತ್ತಿದ್ದಾಗ ಉತ್ತರ ಪ್ರದೇಶದ ತುಂಡ್ಲಾ ಜಂಕ್ಷನ್ ನಿಂದ 15 ಕಿಲೋ ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ರೈಲು ಹಳಿಯಲ್ಲಿ ಹಸುಗಳು ಓಡಾಡುತ್ತಿದ್ದಾಗ ಚಕ್ರ ಜಾರಿ ಈ ಘಟನೆ ನಡೆದಿದೆ. ಎಂಜಿನಿಯರ್ ಗಳು ಈ ಬಗ್ಗೆ ತಪಾಸಣೆ ನಡೆಸುತ್ತಾರೆ ಎಂದು ಉತ್ತರ ರೈಲ್ವೆ ವಿಭಾಗದ ಸಿಪಿಆರ್ ಒ ದೀಪಕ್ ಕುಮಾರ್ ತಿಳಿಸಿದ್ದಾರೆ.
ಅಡೆತಡೆಯನ್ನು ನಿವಾರಿಸಿದ ನಂತರ ರೈಲು ಬೆಳಗ್ಗೆ 8.15ರ ಸುಮಾರಿಗೆ ದೆಹಲಿ ಕಡೆಗೆ ಪ್ರಯಾಣ ಬೆಳೆಸಿತು.
ರೈಲು 18ನ್ನು ವಂದೇ ಭಾರತ್ ಎಕ್ಸ್ ಪ್ರೆಸ್ ಎಂದು ಹೆಸರಿಸಲಾಗಿದ್ದು ಚೆನ್ನೈಯ ಆಂತರಿಕ ಕೋಚ್ ಫ್ಯಾಕ್ಟರಿ ತಯಾರಿಸಿದೆ.
ಪ್ರಾಯೋಗಿಕ ಸಂಚಾರದಲ್ಲಿ ದೆಹಲಿ-ಮುಂಬೈ ರಾಜಧಾನಿ ಮಾರ್ಗದಲ್ಲಿ ದೇಶದ ಅತಿ ವೇಗದ ರೈಲು ಗಂಟೆಗೆ 180 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಿದೆ. ವಾಣಿಜ್ಯಾತ್ಮಕವಾಗಿ ಇದೇ 17ರಿಂದ ಸಂಚಾರ ಆರಂಭಿಸಲಿದೆ.