ಅಹಮದಾಬಾದ್: ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಗುಜರಾತಿನಲ್ಲಿ ಜಾಮ್ ನಗರ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಅವರು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿದೆ.
ಗುಜರಾತಿನ ಪಟೇಲ್ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಾರ್ದಿಕ್ ಪಟೇಲ್ಮಾರ್ಚ್ 12 ರಂದು ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾಮ್ ನಗರ್ ಲೋಕಸಭಾ ಕ್ಷೇತ್ರವನ್ನು ಪ್ರಸ್ತುತ ಭಾರತೀಯ ಜನತಾ ಪಕ್ಷದ ಪೂನಂಬೆನ್ ಮಾಧಮ್ ಪ್ರತಿನಿಧಿಸುತ್ತಿದ್ದಾರೆ.
ಪಟೇಲ್ ಕೈ ಪಕ್ಷಕ್ಕೆ ಅಹಮದಾಬಾದ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆಯಾಗಿ ನಿರ್ಧಾರಕ್ಕೆ ಬರಲಿದೆ. ಅದೇ ವೇಳೆ ಕಾಂಗ್ರೆಸ್ ಉನ್ನತ ನಾಯಕರು ಆ ದಿನ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಗೆ ಕಠಿಣ ಪೈಪೋಟಿ ನೀಡಿದ್ದ ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಂತ ನಾಡಾದ ಗುಜರಾತಿನಲ್ಲೇ ಅವರಿಗೆ ಹಿನ್ನಡೆ ನೀಡಲು ತಂತ್ರ ಹೆಣೆದಿದೆ.