

ನವದೆಹಲಿ: ಕೋವಿಡ್-19ಗೆ ಒಳಗಾಗುತ್ತಿರುವ ಹೊಸ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕಳೆದ ಆಗಸ್ಟ್ 13ರಿಂದ ಕಡಿಮೆಯಾಗುತ್ತಿದೆ. ಹಾಗೆಂದು ಎಚ್ಚರ ತಪ್ಪುವುದು ಸರಿಯಲ್ಲ, ಕೇವಲ 5 ದಿನಗಳ ಅಂಕಿಅಂಶದಿಂದ ಕೊರೋನಾ ಸೋಂಕು ಕಡಿಮೆಯಾಗಿದೆ, ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್, ಪ್ರತಿದಿನ 7ರಿಂದ 8 ಲಕ್ಷ ಕೊರೋನಾ ವೈರಸ್ ಪರೀಕ್ಷೆ ಮಾಡುತ್ತಿದ್ದರೂ ಕೂಡ ಪಾಸಿಟಿವ್ ರೋಗಿಗಳ ಸಂಖ್ಯೆ ಕಳೆದ ನಾಲ್ಕೈದು ದಿನಗಳಲ್ಲಿ ಶೇಕಡಾ 10.3ರಿಂದ ಶೇಕಡಾ 7.72ಕ್ಕೆ ತಗ್ಗಿದೆ. ಆಗಸ್ಟ್ 13ರಿಂದ ಪ್ರತಿದಿನ ಹೊಸ ಕೊರೋನಾ ಸೋಂಕಿತರ ಸಂಖ್ಯೆ 64 ಸಾವಿರದಿಂದ 55 ಸಾವಿರದ 079ಕ್ಕೆ ಇಳಿಕೆಯಾಗಿದೆ ಎಂದರು.
ನಿನ್ನೆಯ ಹೊತ್ತಿಗೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 27 ಲಕ್ಷಕ್ಕೆ ಏರಿಕೆಯಾಗಿದೆ. ಇದುವರೆಗೆ 19.77 ಲಕ್ಷ ಮಂದಿ ಗುಣಮುಖರಾಗಿದ್ದು ಸೋಂಕಿನಿಂದ ಗುಣಮುಖ ಹೊಂದುವವರ ಸಂಖ್ಯೆ ಶೇಕಡಾ 73.18ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ಹೇಳಿದೆ.