ಸಂಭಾಲ್: ಉತ್ತರ ಪ್ರದೇಶದ ಸಂಭಾಲ್'ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬಸ್ ಹಾಗೂ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿ, 25ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಬುಧವಾರ ನಡೆದಿದೆ.
ಇಂದು ಬೆಳಗಿನ ಜಾವ ದುರ್ಘಟನೆ ಸಂಭವಿಸಿದೆ. ಧಾನರಿ ಪ್ರದೇಶದಲ್ಲಿ ಗಟ್ಟ ಮಂಜಿನ ವಾತಾವರಣವಿದ್ದ ಕಾರಣ ಬಸ್ ಹಾಗೂ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದೆ ಎಂದು ಸಂಭಾಲ್ ಜಿಲ್ಲೆಯ ಎಸ್'ಪಿ ಚಕ್ರೇಶ್ ಮಿಶ್ರಾ ಅವರು ಹೇಳಿದ್ದಾರೆ.
ಅಪಘಾತ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಲಾಯಿತು. ಈ ವೇಳೆ ಗಾಯಾಳುಗಳನ್ನು ಕೂಡಲೇ ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಎಂದು ತಿಳಿಸಿದ್ದಾರೆ.
ಘಟನೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
Advertisement