ನೋಯ್ಡಾ ಶಾಲೆಯಲ್ಲಿ ಕೊರೋನಾ ಭೀತಿ: 40 ವಿದ್ಯಾರ್ಥಿಗಳ ಮೇಲೆ 28 ದಿನ ತೀವ್ರ ನಿಗಾ

ಚೀನಾ ಮಾತ್ರವಲ್ಲದೇ ವಿಶ್ವಾದ್ಯಂತ ಮೂರು ಸಾವಿರಕ್ಕೂ ಅಧಿಕ ಮಂದಿಯ ಬಲಿ ತೆಗೆದುಕೊಂಡಿರುವ ಮಾರಕ ಕೊರೋನಾ ವೈರಸ್ ಭೀತಿಯಿಂದಾಗಿ ನೋಯ್ಡಾದ ಶಾಲೆಯೊಂದರ 40 ಶಾಲಾಮಕ್ಕಳನ್ನು 28 ದಿನಗಳ ಕಾಲ ತೀವ್ರ ನಿಗಾದಲ್ಲಿರಿಸಲಾಗಿದ್ದು, ಪ್ರಸ್ತುತ ಶಾಲೆಯನ್ನು ಸ್ಥಗಿತ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಚೀನಾ ಮಾತ್ರವಲ್ಲದೇ ವಿಶ್ವಾದ್ಯಂತ ಮೂರು ಸಾವಿರಕ್ಕೂ ಅಧಿಕ ಮಂದಿಯ ಬಲಿ ತೆಗೆದುಕೊಂಡಿರುವ ಮಾರಕ ಕೊರೋನಾ ವೈರಸ್ ಭೀತಿಯಿಂದಾಗಿ ನೋಯ್ಡಾದ ಶಾಲೆಯೊಂದರ 40 ಶಾಲಾಮಕ್ಕಳನ್ನು 28 ದಿನಗಳ ಕಾಲ ತೀವ್ರ ನಿಗಾದಲ್ಲಿರಿಸಲಾಗಿದ್ದು, ಪ್ರಸ್ತುತ ಶಾಲೆಯನ್ನು ಸ್ಥಗಿತ ಮಾಡಲಾಗಿದೆ.

ಹೌದು...ರಾಷ್ಟ್ರ ರಾಜಧಾನಿ ದೆಹಲಿಗೆ ಕೂಗಳತೆ ದೂರದಲ್ಲಿರುವ ನೋಯ್ಡಾದಲ್ಲಿ ಕೊರೋನಾ ವೈರಸ್ ಭಾರಿ ಸುದ್ದಿ ಮಾಡುತ್ತಿದ್ದು, ನೋಯ್ಡಾದ ಗೌತಮ್ ಬುದ್ಧ ನಗರದಲ್ಲಿರುವ ಶಾಲೆಯೊಂದನ್ನು ವೈರಸ್ ಭೀತಿಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.  

ನೋಯ್ಡಾದ ಗೌತಮ್ ಬುದ್ಧ ನಗರದಲ್ಲಿರುವ ಶ್ರೀರಾಮ್ ಮಿಲ್ಲೇನಿಯಂ ಶಾಲೆಯ ವಿದ್ಯಾರ್ಥಿಗಳ ಪೋಷಕರೊಬ್ಬರಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಕಂಡುಬಂದಿದ್ದು, ಆ ಸೋಂಕು ವಿದ್ಯಾರ್ಥಿ ಮೂಲಕ ಶಾಲೆಯ ಇತರೆ ವಿದ್ಯಾರ್ಥಿಗಳಲ್ಲೂ ಹರಡಿರುವ ಶಂಕೆ ಮೇರೆಗೆ ಮುಂದಿನ 2ರಿಂದ 3 ದಿನಗಳ ಕಾಲ ಶಾಲೆಯ ವೈಜ್ಞಾನಿಕ ಸ್ವಚ್ಛತಾ ಕಾರ್ಯ ನಡೆಯಲಿದ್ದು, ಇದೇ ಕಾರಣಕ್ಕೆ ಶಾಲೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನು ಶಾಲೆಯಲ್ಲಿನ 40 ವಿದ್ಯಾರ್ಥಿಗಳಲ್ಲಿ ಸೋಂಕು ಹರಡಿರುವ ಶಂಕೆ ಮೇರೆಗೆ 40 ವಿದ್ಯಾರ್ಥಿಗಳ ಮೇಲೆ 28 ದಿನಗಳ ಕಾಲ ತೀವ್ರ ನಿಗಾ ಇರಿಸಲಾಗಿದೆ. 

ಅಲ್ಲದೆ ಎಲ್ಲ ವಿದ್ಯಾರ್ಥಿಗಳ ಮಕ್ಕಳ ರಕ್ತ ಮಾದರಿಗಳನ್ನು ತನಿಖೆಗೆ ಕಳುಹಿಸಲು ಶಾಲಾ ಆಡಳಿತ ಮಂಡಳಿ ನಿರ್ಧರಿಸಿದೆ. ಅಲ್ಲದೆ ಎಲ್ಲ ವಿದ್ಯಾರ್ಥಿಗಳನ್ನು 28 ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ ಎಂದು ಗೌತಮ ಬುದ್ಧ ನಗರದ ಮುಖ್ಯ ಆರೋಗ್ಯಾಧಿಕಾರಿ ಅನುರಾಗ್ ಭಾರ್ಗವ್  ತಿಳಿಸಿದ್ದಾರೆ.

'ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಶಾಲೆಗೆ ರಜೆ ನೀಡಲಾಗಿದೆ. ಈ ಅವಧಿಯಲ್ಲಿ ಶಾಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ಶಾಲಾ ಆವರಣ ಸೇರಿದಂತೆ ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಹಾಗೆಯೇ 40 ವಿದ್ಯಾರ್ಥಿಗಳನ್ನು ನೋಯ್ಡಾದಲ್ಲಿ ಪರೀಕ್ಷಿಸಲಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ವರದಿ ಬರಲಿದೆ ಎಂದು ತಿಳಿಸಿದ್ದಾರೆ ಅನುರಾಗ್ ಭಾರ್ಗವ್ ಹೇಳಿದ್ದಾರೆ.

ಹೆಸರೇಳಲು ಇಚ್ಛಿಸದ ಶಾಲೆಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ದೆಹಲಿಯ ಮಯೂರ್ ವಿಹಾರ್ ನ ವಿದ್ಯಾರ್ಥಿಯ ಪೋಷಕರಲ್ಲಿ ಸೋಂಕು ತಗುಲಿರುವುದನ್ನು ಸ್ಪಷ್ಟಪಡಿಸಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಯ ಪೋಷಕರಲ್ಲಿ ಕೋವಿಡ್​-19 ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ನಾವು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಹಾಗೂ ಪರಿಸ್ಥಿತಿ ನಿರ್ವಹಣೆ ವಿಚಾರವಾಗಿ ನಿರಂತರವಾಗಿ ಆರೋಗ್ಯ ಸಚಿವಾಲಯದ ಸಂಪರ್ಕದಲ್ಲಿ ಇದ್ದೇವೆ ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಕೊರೋನಾ ಸೋಂಕು ಕಾಣಿಸಿಕೊಂಡಿರುವ ದೆಹಲಿ ಪೋಷಕರ ಮನೆಯಲ್ಲಿ ಈ ಹಿಂದೆ ಬರ್ತ್ ಡೇ ಪಾರ್ಟಿ ಆಯೋಜನೆಯಾಗಿತ್ತು ಎನ್ನಲಾಗಿದೆ. ಹೀಗಾಗಿ ಈ ಬರ್ತ್ ಡೇ ಪಾರ್ಟಿಗೆ ಬಂದಿದ್ದವರಿಗೂ ಕೊರೋನಾ ವೈರಸ್ ಸೋಂಕು ತಗುಲಿರುವ ಶಂಕೆ ಮೇರೆಗೆ ತೀವ್ರ ನಿಗಾ ಇರಿಸಲಾಗಿದೆ. ಅಲ್ಲದೆ ದೆಹಲಿ ವಿದ್ಯಾರ್ಥಿ ಪೋಷಕರು ಇರುವ ಮಯೂರ್ ವಿಹಾರ್ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಆಗ್ರಾದಲ್ಲಿ 6 ಕೊರೋನಾ ಶಂಕಿತ ಪ್ರಕರಣ
ನಿನ್ನೆ ದೆಹಲಿ ಮತ್ತು ತೆಲಂಗಾಣ ಮೂಲದ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ, ಇಂದು ಆಗ್ರಾದ 6 ಮಂದಿಯಲ್ಲಿ ಕೊರೊನಾ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ. ಅವರಲ್ಲಿ ಓರ್ವ ದೆಹಲಿಯಲ್ಲಿ ಕೊರೊನಾ ತಗುಲಿದ್ದ ವ್ಯಕ್ತಿಯನ್ನು ಸಂಪರ್ಕಿಸಿ ಬಂದಿದ್ದ ಎನ್ನಲಾಗಿದೆ. ಶಂಕಿತ ವೈರಸ್ ಸೋಂಕಿತ ವ್ಯಕ್ತಿ ದೆಹಲಿಯ ಮಯೂರ್ ವಿಹಾರ್ ನಿವಾಸಿ ಎಂದು ತಿಳಿದುಬಂದಿದೆ. ಸದ್ಯ ಕೊರೊನಾ ಶಂಕಿತರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಖಚಿತತೆಗಾಗಿ ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಈ ಆರು ಕೊರೊನಾ ಶಂಕಿತ ವ್ಯಕ್ತಿಗಳನ್ನು ಸಂಪರ್ಕಿಸಿದ್ದವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ದೆಹಲಿ ಮೂಲದ ವ್ಯಕ್ತಿ ಇಟಲಿಯಿಂದ ಪ್ರಯಾಣ ಬೆಳೆಸಿದ್ದರು. ತೆಲಂಗಾಣದ ವ್ಯಕ್ತಿ ದುಬೈನಿಂದ ಪ್ರಯಾಣ ಮಾಡಿದ್ದರು. ಇಬ್ಬರು ರೋಗಿಗಳ ಸ್ಥಿತಿ ಸ್ಥಿರವಾಗಿದ್ದು,ಸೂಕ್ತ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com