

ನವದೆಹಲಿ: ದೇಶದಾದ್ಯಂತ ಒಟ್ಟು 6 ಮಂದಿಯಲ್ಲಿ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರೀಯ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇಟಲಿಯಿಂದ ಬಂದಿರುವ ಮೂವರು ನವದೆಹಲಿ, ತೆಲಂಗಾಣ ಹಾಗೂ ರಾಜಸ್ತಾನಕ್ಕೆ ಬಂದಿಳಿದಿದ್ದು, ಈ ಮೂವರಲ್ಲೂ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಹಿಂದೆ ಕೇರಳದ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಇದೀಗ ಈ ಮೂವರೂ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹೇಳಿದೆ.
ಈ ಆರು ಮಂದಿಯಲ್ಲೂ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ರಕ್ತದ ಮಾದರಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಈ ನಡುವೆ ಸೋಮವಾರ ರಾಜಸ್ಥಾನದ ಜೈಪುರಕ್ಕೆ ಬಂದಿದ್ದ ಇಟಲಿ ಮೂಲದ ಪ್ರವಾಸಿಗನಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಇದೀಗ ಅವರ ಪತ್ನಿಗೂ ಸೋಂಕು ತಗುಲಿರುವುದು ಖಚಿತವಾಗಿದೆ. ಇದನ್ನು ಇನ್ನಷ್ಟು ಖಚಿತಪಡಿಸುವ ನಿಟ್ಟಿನಲ್ಲಿ ಅವರ ರಕ್ತದ ಮಾದರಿಯನ್ನು ಪುಣೆಗೆ ಕಳುಹಿಸಿಕೊಡಲಾಗಿದೆ. ಮತ್ತೊಂದೆಡೆ ಇಟಲಿ ಪ್ರವಾಸಿಗರ ಜೊತೆ ಸಂಪರ್ಕದಲ್ಲಿದ್ದ ಇಟಲಿಯ ಇತರೆ 21 ಪ್ರವಾಸಿಗರು, 3 ಭಾರತೀಯ ಪ್ರವಾಸಿಗರನ್ನು ದೆಹಲಿ ಹೊರವಲಯದ ನಿಗಾ ಘಟಕಕ್ಕೆ ಕಳುಹಿಸಿಕೊಡಲಾಗಿದೆ. ಈ ನಡುವ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ 6 ಮಂದಿಯಲ್ಲಿ ವೈರಸ್ ಪತ್ತೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.