

ನವದೆಹಲಿ: ಉಭಯ ದೇಶಗಳ ನಡುವೆ ಮಾತುಕತೆ ನಡೆಸುವ ಒಲವು ವ್ಯಕ್ತಪಡಿಸಿ ಭಾರತ ಸಂದೇಶ ಕಳುಹಿಸಿದೆ ಎಂಬ ರಾಷ್ಟ್ರೀಯ ಭದ್ರತೆ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಸಲಹೆಗಾರರ ಹೇಳಿಕೆಯನ್ನು ಭಾರತ ಗುರುವಾರ ಖಂಡಿಸಿದೆ.
"ಮಾತುಕತೆಗೆ ಭಾರತ ಸಂದೇಶ ಕಳುಹಿಸಿದೆ ಎಂಬ ಪಾಕ್ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಭಾರತ, ನಮ್ಮ ಕಡೆಯಿಂದ ಅಂತಹ ಯಾವುದೇ ಸಂದೇಶವನ್ನು ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಹೇಳಿದ್ದಾರೆ.
ಪಾಕ್ ಪ್ರಧಾನಿ ಸಲಹೆಗಾರ ಮೊಯೀದ್ ಯೂಸುಫ್ ಅವರು ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ, ಭಾರತ ಮಾತುಕತೆಗೆ ಒಲವು ತೋರಿದೆ. ಆದರೆ ನಾವು, ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಡಲಾಗಿರುವ ಹಲವು ಬದಲಾವಣೆಗಳನ್ನು ಹಿಂದಕ್ಕೆ ಪಡೆಯಬೇಕು ಎಂಬ ಷರತ್ತನ್ನು ವಿಧಿಸಿದ್ದೇವೆ ಎಂದು ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅನುರಾಗ್ ಶ್ರೀವಾಸ್ತವ ಅವರು, "ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ಭಾರತೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವರದಿಗಳನ್ನು ನಾವು ಗಮನಿಸಿದ್ದೇವೆ. ಅವರು ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ" ಎಂದು ಶ್ರೀವಾಸ್ತವ ತಿಳಿಸಿದ್ದಾರೆ.
"ಯಾವಾಗಲೂ ಹಾಗೆ, ಪಾಕಿಸ್ತಾನ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಭಾರತವನ್ನು ಎಳೆದು ತರುವ ಯತ್ನ ಮಾಡುತ್ತದೆ ಎಂದಿದ್ದಾರೆ.