ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಲಭ್ಯವಾಗಲಿದೆ ಕೊರೋನಾಗೆ ಲಸಿಕೆ: ದೆಹಲಿ ಏಮ್ಸ್ ನಿರ್ದೇಶಕ

ಆಕ್ಸ್'ಫರ್ಡ್-ಅಸ್ಟ್ರಾಜೆನೆಕಾ ಕೊರೋನಾ ವೈರಸ್ ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ನಲ್ಲಿ ಅನುಮೋದನೆ ದೊರತಿರುವುದು ಮಹತ್ವದ ಬೆಳವಣಿಗೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿಯೂ ಕೊರೋನಾ ಲಸಿಕೆ ಲಭ್ಯವಾಗಲಿದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಆಕ್ಸ್'ಫರ್ಡ್-ಅಸ್ಟ್ರಾಜೆನೆಕಾ ಕೊರೋನಾ ವೈರಸ್ ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ನಲ್ಲಿ ಅನುಮೋದನೆ ದೊರತಿರುವುದು ಮಹತ್ವದ ಬೆಳವಣಿಗೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿಯೂ ಕೊರೋನಾ ಲಸಿಕೆ ಲಭ್ಯವಾಗಲಿದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಅವರು ಹೇಳಿದ್ದಾರೆ. 

ಬ್ರಿಟನ್ ಸರ್ಕಾರ ಆಕ್ಸ್'ಫರ್ಡ್ ಲಸಿಕೆಯ ಮಾನವ ಬಳಕೆಗೆ ಅನುಮತಿ ನೀಡಿದ ಬೆನ್ನಲ್ಲೇ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿ ನಿನ್ನೆಯಷ್ಟೇ ದೆಹಲಿಯಲ್ಲಿ ಮಧ್ಯಾಹ್ನ ಸಭೆ ಸೇರಿ, ಮಾತುಕತೆ ನಡೆಸಿದೆ. 

ಫೈಝರ್, ಸೀರಂ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಕುರಿತು ಮಾತುಕತೆ ವೇಳೆ ಪರಾಮರ್ಶೆ ನಡೆಸಲಾಗಿದೆ. 

ಸೀರಂ ಹಾಗೂ ಭಾರತ್ ಬಯೋಟೆಕ್ ಸಲ್ಲಿಸಿದ್ದ ಹೆಚ್ಚುವರಿ ದತ್ತಾಂಶ ಹಾಗೂ ಮಾಹಿತಿಯನ್ನು ಪರಿಶೀಲನೆ ನಡೆಸಲಾಗಿದೆ. ಆದರೆ, ತನಗೆ ಮತ್ತಷ್ಟು ಸಮಯ ಬೇಕೆಂದು ಫೈಝರ್ ಕೇಳಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಜ.1ರ ಶುಕ್ರವಾರ ಮತ್ತೊಮ್ಮೆ ಸಭೆ ಸೇರಲು ನಿರ್ಧರಿಸಲಾಗಿದೆ. ಅಂದು ದೇಶದ ಮೊದಲ ಕೊರೋನಾ ಲಸಿಕೆಗೆ ಅನುಮತಿ ಸಿಗುವ ನಿರಾಕ್ಷೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ಎಲ್ಲಾ ಬೆಳವಣಿಗೆ ನಡುವಲ್ಲೇ ಏಮ್ಸ್ ನಿರ್ದೇಶಕರು ಎಎನ್ಐ ಸುದ್ದಿ ಸಂಸ್ಥೆಯ ಸಂದರ್ಶನದಲ್ಲಿ ನೀಡಿರುವ ಹೇಳಿಕೆ ಲಸಿಕೆ ಶೀಘ್ರದಲ್ಲೇ ಬರುವ ಕುರಿತು ಜನರಲ್ಲಿ ಆಶಾಭಾವನೆಯನ್ನು ಹುಟ್ಟುಹಾಕಿದೆ. 

ಎಎನ್ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೆ ನೀಡಿರುವ ರಣದೀಪ್ ಗುಲೇರಿಯಾ ಅವರು, ಬ್ರಿಟನ್ ಸರ್ಕಾರ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆಯನ್ನು ಭಾರತದಲ್ಲಿ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸುತ್ತಿದೆ. ಇದು ಭಾರತಕ್ಕೆ ಮಾತ್ರವಲ್ಲದೆ ವಿಶ್ವದ ಅನೇಕ ಭಾಗಗಳಿಗೂ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. 

ಈ ಲಸಿಕೆಯನ್ನು 2ರಿಂದ 8 ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಲ್ಲಿ ದಾಸ್ತಾನು ಮಾಡಬಹುದು. ಸರಳ ಫ್ರಿಡ್ಜ್‌ಗಳಲ್ಲಿಯೂ ಸ್ಟೋರೇಜ್‌ ಮಾಡಬಹುದಾಗಿದೆ. ಫೈಜರ್‌ ಲಸಿಕೆಯನ್ನು ಮೈನಸ್‌ 70 ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಲ್ಲಿ ಸಂಗ್ರಹಿಸಿಡಬೇಕು. ಆದರೆ ಅಸ್ಟ್ರಾಜೆನಿಕಾ ಲಸಿಕೆ ಸ್ಟೋರೇಜ್‌ ವಿಧಾನ ಅತ್ಯಂತ ಸರಳವಾಗಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಭಾರತದಲ್ಲಿ ಕೊರೋನಾ ಲಸಿಕೆ ವಿತರಣೆ ಕುರಿತಂತೆ ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ಲಸಿಕೆ ಲಭ್ಯವಾಗಲಿದ್ದು, ದೇಶದ ಬಹುಪಾಲು ಜನತೆಗೆ ಲಸಿಕೆ ಪೂರೈಕೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com