23 ಮಕ್ಕಳ ಬಿಡುಗಡೆಗೆ 23 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಕಿಡಿಗೇಡಿ ಫಿನಿಶ್: ಮಕ್ಕಳು ಸೇಫ್

ದುಷ್ಕರ್ಮಿಯೊಬ್ಬ 23 ಮಕ್ಕಳನ್ನು ಒತ್ತೆಯಿಟ್ಟುಕೊಂಡು ಅವರ ಬಿಡುಗಡೆಗೆ 23 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ  ಪೊಲೀಸರ ತಾಳ್ಮೆ ಹಾಗೂ ಜಾಣ್ಮೆಯ ಪರಿಣಾಮ ಎನ್‍ ಕೌಂಟರ್ ನಲ್ಲಿ ಆರೋಪಿ ಮೃತಪಟ್ಟಿದ್ದು ಮಕ್ಕಳು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ.

Published: 31st January 2020 07:00 PM  |   Last Updated: 31st January 2020 07:00 PM   |  A+A-


Police

ಪೊಲೀಸರು

Posted By : Vishwanath S
Source : UNI

ಲಖನೌ: ದುಷ್ಕರ್ಮಿಯೊಬ್ಬ 23 ಮಕ್ಕಳನ್ನು ಒತ್ತೆಯಿಟ್ಟುಕೊಂಡು ಅವರ ಬಿಡುಗಡೆಗೆ 23 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ  ಪೊಲೀಸರ ತಾಳ್ಮೆ ಹಾಗೂ ಜಾಣ್ಮೆಯ ಪರಿಣಾಮ ಎನ್‍ ಕೌಂಟರ್ ನಲ್ಲಿ ಆರೋಪಿ ಮೃತಪಟ್ಟಿದ್ದು ಮಕ್ಕಳು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ.
  
ಈ ಕುರಿತು ಸರ್ಕಾರದ ವಕ್ತಾರರು ಶುಕ್ರವಾರ ಮಾಹಿತಿ ನೀಡಿದ್ದು, "ಆರೋಪಿ ಸುಭಾಷ್ ಬಾಥಮ್ ತಲಾ 1 ಕೋಟಿಯಂತೆ 23 ಮಕ್ಕಳ ಬಿಡುಗಡೆಗೆ 23 ಕೋಟಿ ರೂಪಾಯಿ ನೀಡುವಂತೆ ಬೇಡಿಕೆಯಿಟ್ಟಿದ್ದ. ಒಂದು ವೇಳೆ ಹಣ ನೀಡದಿದ್ದರೆ ಎಲ್ಲ ಮಕ್ಕಳನ್ನೂ ಕೊಲ್ಲುವುದಾಗಿಯೂ, ಈ ಹಿಂದೆ ತಾನು ಅಪರಾಧಗಳನ್ನು ಮಾಡಿರುವ ಕಾರಣ ಹತ್ಯೆಗೆ ಹಿಂಜರಿಯುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದ.  

ಒಂದು ಹಂತದಲ್ಲಿ, ಗ್ರಾಮಸ್ಥರೊಂದಿಗೆ ಮಾತನಾಡಲು ನಿರಾಕರಿಸಿದ ಆತ ಮನೆಯಿಂದ ಬಾಂಬ್ ಸ್ಫೋಟಿಸುವುದಾಗಿ ಹೆದರಿಸಿದ್ದ. ಅಲ್ಲದೆ  ಮನೆಯೊಳಗೆ ಬಾಂಬ್‌ಗಳನ್ನು ಅಳವಡಿಸಿ ಸ್ಫೋಟಕಗಳನ್ನು ಸಂಗ್ರಹಿಸಿರುವುದನ್ನು ಜನರು ನೋಡಿದ್ದರು. ನಂತರ, ಒಂದು ಬಾಗಿಲಿನ ಬಳಿ ಸ್ಫೋಟವೂ ಕೇಳಿಬಂದಿತ್ತು ಎಂದು ಮಾಹಿತಿ ನೀಡಿದ್ದಾರೆ.

ಇಂತಹ ಪರಿಸ್ಥಿತಿಯನ್ನು ಪೊಲೀಸರು ಅತ್ಯಂತ ಬುದ್ಧಿವಂತಿಕೆಯಿಂದ ನಿರ್ವಹಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯಾವುದೇ ಕಾರಣಕ್ಕೂ ಮಕ್ಕಳ ಜೀವಕ್ಕೆ ಅಪಾಯವಾಗದಂತೆ ಜಾಗ್ರತೆ ವಹಿಸಲು ಸೂಚಿಸಿದ್ದರು ಎಂದಿದ್ದಾರೆ.

ರಕ್ಷಣಾ ಕಾರ್ಯಾಚರಣೆ ವೇಳೆ 9 ತಿಂಗಳ ಮಗು ಸೇರಿದಂತೆ 23 ಮಕ್ಕಳು ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಗಿದ್ದ ಆರೋಪಿಯ ಮಗಳನ್ನೂ ರಕ್ಷಿಸಲಾಗಿದೆ. ಆದರೆ ಕಿಡಿಗೇಡಿಯ ಪತ್ನಿ ರೂಬಿ, ಗ್ರಾಮಸ್ಥರ ಕಲ್ಲೇಟಿಗೆ ಮೃತಪಟ್ಟಿದ್ದಾಳೆ.
  
ಆರೋಪಿಯು ಮಧ್ಯರಾತ್ರಿಯ ನಂತರ ಸ್ವಲ್ಪ ಸಮಯದವರೆಗೆ ಶಾಂತವಾಗಿದ್ದಾಗ, ಗ್ರಾಮಸ್ಥರ ಸಹಾಯದಿಂದ ಪೊಲೀಸರು ಮನೆಯ ಹಿಂದಿನ ಬಾಗಿಲು ತೆರೆದು ಒಳಗೆ ಹೋದರು. ಪೊಲೀಸರನ್ನು ನೋಡಿದ ಬಾಥಮ್ ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದನು, ಆದರೆ ಅವರು ಯಾವುದೇ ಮಕ್ಕಳಿಗೆ ಘಾಸಿಯಾಗದಂತೆ ಆತನನ್ನು ಕರೆದೊಯ್ದರು. ನಂತರ ಆತನನ್ನು ಪೊಲೀಸರು ಗುಂಡಿಕ್ಕಿ ಕೊಂದರು ಎಂದು ಸರ್ಕಾರಿ ವಕ್ತಾರರು ವಿವರಿಸಿದ್ದಾರೆ.

ಮಕ್ಕಳನ್ನು ಒತ್ತೆಯಿರಿಸಿಕೊಂಡಿದ್ದ ಮನೆಯನ್ನೇ ಸ್ಫೋಟಿಸುವುದಾಗಿ ಆರೋಪಿ ಬೆದರಿಕೆ ಹಾಕಿದ್ದ. ಅಲ್ಲದ ಆತನ ಮನೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕ, ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗಳ ಸಂಗ್ರಹವಿದ್ದ ಕಾರಣ ಆತಂಕಕ್ಕೆ ಎಡೆಯಾಗಿತ್ತು. ಮಕ್ಕಳ ರಕ್ಷಣಾ ಕಾರ್ಯಾಚರಣೆ ವೇಳೆ ಗ್ರಾಮಸ್ಥ ಅನುಪಮ್ ದುಬೆ, ಪೊಲೀಸ್ ಅಧಿಕಾರಿ ಮೊಹಮ್ಮದಾಬಾದ್ ರಾಕೇಶ್ ಕುಮಾರ್, ಪೇದೆ ಅನಿಲ್ ಕುಮಾರ್ ಗಾಯಗೊಂಡಿದ್ದಾರೆ.

ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾದವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಲಾ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp