ಲಡಾಖ್ ಗಡಿಯಲ್ಲಿ ಚೀನಾ ಹತ್ಯಾಕಾಂಡ: ಇಂದು ಸಂಜೆ ಪ್ರಧಾನಿ ಮೋದಿ ಸರ್ವಪಕ್ಷ ಸಭೆ

ಗಲ್ವಾನ್ ಕಣಿವೆಯಲ್ಲಿ ಉಂಟಾದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಸಂಜೆ ಸರ್ವಪಕ್ಷ ಸಭೆ ನಡೆಸಲಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಉಂಟಾದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಸಂಜೆ ಸರ್ವಪಕ್ಷ ಸಭೆ ನಡೆಸಲಿದ್ದಾರೆ. 

ಇಂದು ಸಂಜೆ 5 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರ್ವಪಕ್ಷ ನಡೆಸಲಿದ್ದು, ಸಬೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ 20 ಪಕ್ಷಗಳ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಆದರೆ, ಸಭೆಗೆ ಆಮ್ ಆದ್ಮಿ ಪಕ್ಷಕ್ಕೆ ಆಹ್ವಾನ ನೀಡಿಲ್ಲ ಎಂದು ವರದಿಗಳಿಂದ ತಿಳಿದುಬಂದಿದೆ. ಸಭೆಯಲ್ಲಿ 15 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. 

ಸಂಜೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಯಲಿದ್ದು, ಭಾರತ-ಚೀನಾ ಗಡಿ ಉದ್ವಿಗ್ನತೆಯ ಹಿನ್ನಲೆಯಲ್ಲಿ ಸದ್ಯದ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಯಲಿದೆ. ಚೀನಾ ಬಗ್ಗೆ ಮುಂದೆ ಯಾವ ನಿಲುವು ಹೊಂದಬೇಕು ಎಂಬುದರ ಬಗ್ಗೆ ಸಭೆಯಲ್ಲಿ ವಿವರವಾಗಿ ಸಮಾಲೋಚನೆ ನಡೆಯಲಿದೆ. 

ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಷ್ಟ್ರಪತಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ ಕರೆ ಮಾಡಿ ಸಭೆಯ ಉದ್ದೇಶದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಪೂರ್ವ ಲಡಾಖ್'ನ ಗಲ್ವಾನ್ ಗಡಿಯಲ್ಲಿ ಹಲವು ತಿಂಗಳುಗಳಿಂದ ಬಿಕ್ಕಟ್ಟು ಏರ್ಪಟ್ಟಿದೆ. ಈ ಕುರಿತು ಎರಡೂ ದೇಶಗಳ ನಡುವೆ ಮಾತುಕತೆ ನಡೆದಿದ್ದು, ಸ್ಥಳದಿಂದ ಹಿಂದೆ ಸರಿಯುವ ಕುರಿತು ಒಮ್ಮತಕ್ಕೆ ಬರಲಾಗಿತ್ತು. ಅದರಂತೆ ಚೀನಾ ಯೋಧರು ಸೋಮವಾರ ರಾತ್ರಿ ಕಾಲ್ತೆಗೆಯಲು ಆರಂಭಿಸಿದ್ದರು. 

ಈ ಸಂದರ್ಭದಲ್ಲಿ ಏಕಾಏಕಿ ಭಾರತೀಯ ಯೋಧರ ಮೇಲೆ ದೊಣ್ಣೆ ಹಾಗೂ ಕಲ್ಲುಗಳಿಂದ ದಾಳಿ ನಡೆಸಿದ್ದರು. ಕೂಡಲೇ ಭಾರತೀಯ ಯೋಧರು ಪ್ರತಿದಾಳಿಗೆ ಇಳಿದರು. ಹಲವು ತಾಸುಗಳ ಕಾಲ ಯೋಧರ ನಡುವೆ ಘರ್ಷಣೆ ನಡೆಯಿತು. ಮಧ್ಯರಾತ್ರಿ ಬಳಿಕ ಕಲಹ ನಿಂತಿತ್ತು. ಈ ಘರ್ಷಣೆಯಲ್ಲಿ ಭಾರತದ ಕರ್ನಲ್ ಸೇರಿ 20 ಮಂದಿ ಸಾವನ್ನಪ್ಪಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com