ಕೊರೋನಾ ವೈರಸ್: ದೆಹಲಿ ಮಸೀದಿಗೆ ತೆರಳಿದ್ದ 6 ಮಂದಿ ತೆಲಂಗಾಣ ಮೂಲದವರ ಸಾವು, ದೇಶದಲ್ಲಿ ಸಾವಿನ ಸಂಖ್ಯೆ 42ಕ್ಕೆ ಏರಿಕೆ

ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ಮಸೀದಿಗೆ ತೆರಳಿದ್ದ 6 ಮಂದಿ ತೆಲಂಗಾಣ ಪ್ರಜೆಗಳು ಕೊರೋನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ ಎಂದು ತೆಲಂಗಾಣ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೆಲಂಗಾಣ ಸಿಎಂ ಕೆಸಿಆರ್-ಕೊರೋನಾ ವೈರಸ್ ಚಿಕಿತ್ಸಾ ವಿಭಾಗ
ತೆಲಂಗಾಣ ಸಿಎಂ ಕೆಸಿಆರ್-ಕೊರೋನಾ ವೈರಸ್ ಚಿಕಿತ್ಸಾ ವಿಭಾಗ

ಹೈದರಾಬಾದ್: ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ಮಸೀದಿಗೆ ತೆರಳಿದ್ದ 6 ಮಂದಿ ತೆಲಂಗಾಣ ಪ್ರಜೆಗಳು ಕೊರೋನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ ಎಂದು ತೆಲಂಗಾಣ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಜಾಮುದ್ದೀನ್‌ ಮಸೀದಿಯ ಧಾರ್ಮಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಆರು ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂಬುದಾಗಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಹೇಳಿದ್ದಾರೆ.ಈ ಮಾಹಿತಿ ಅಕ್ಷರಶಃ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಇನ್ನೊಬ್ಬರು ಶ್ರೀನಗರದಲ್ಲಿ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಪೈಕಿ 7 ಜನರು ಅಸುನೀಗಿದ್ದಾರೆ. ಆ ಮೂಲಕ ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ 42ಕ್ಕೆ ಏರಿಕೆಯಾದಂತಾಗಿದೆ. ಆಂತೆಯೇ ದೇಶದಲ್ಲಿ ಕೊರೋನಾ ವೈರಸ್ ಸೋಂಕಿಗೆ ತುತ್ತಾದವರ  ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದ್ದು, ಇಂದು ಮತ್ತೆ 42 ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 1300ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ಮಾರ್ಚ್‌ 18ರಂದು ನಡೆದ ಧಾರ್ಮಿಕ ಕಾರ್ಯಕ್ರಮ ಈಗ ದೊಡ್ಡ ಅಪಾಯ ತಂದೊಡ್ಡುವ ಸಾಧ್ಯತೆ ಇದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಪೈಕಿ 7 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಬೆನ್ನಲ್ಲೇ ಸೋಮವಾರ ಇಡೀ ಪ್ರದೇಶವನ್ನು  ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ. ಜನರ ಚಲನವಲನದ ಮೇಲೆ ನಿಗಾ ಇಡಲು ಡ್ರೋನ್‌ಗಳನ್ನೂ ಬಳಸಿಕೊಳ್ಳಲಾಗುತ್ತಿದೆ. 200 ಮಂದಿಯನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ. ಇವರ ಸಂಪರ್ಕಕ್ಕೆ ಬಂದ 2,000 ಕ್ಕಿಂತ ಹೆಚ್ಚು ಜನರನ್ನು  ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

ಮಾರ್ಚ್‌ 10ರಂದು ನಡೆದ ಈ ಕಾರ್ಯಕ್ರಮದಲ್ಲಿ ಮಲೇಷ್ಯಾ, ಇಂಡೋನೇಷ್ಯಾ, ಸೌದಿ ಅರೇಬಿಯಾ, ಕಜಕಿಸ್ಥಾನದಿಂದ ಅನೇಕರು ಭೇಟಿ ಕೊಟ್ಟಿದ್ದರು. ದೇಶದ ಹಲವು ಭಾಗಗಳಿಂದಲೂ ಹಲವರು ಭೇಟಿ ನೀಡಿ ಊರುಗಳಿಗೆ ತೆರಳಿದ್ದಾರೆ. ಈಗಾಗಲೇ ತೆರಳಿರುವ ವ್ಯಕ್ತಿಗಳಿಂದ ಸೋಂಕು  ಬೇರೆ ಕಡೆ ಹರಡಿರುವ ಸಾಧ್ಯತೆಗಳಿವೆ. ಹೀಗೆ ಉರಿಗೆ ತೆರಳಿದ್ದವರ ಪೈಕಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬನಿಗೆ ಇಲ್ಲಿಂದಲೇ ಸೋಂಕು ತಗುಲಿರಬಹುದೆಂದು ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com