ತಮಿಳುನಾಡಿನಲ್ಲಿ ಕೊರೋನಾ ಆರ್ಭಟ; ಒಂದೇ ಆಸ್ಪತ್ರೆಯ 15 ವೈದ್ಯರಿಗೆ ಸೋಂಕು! 

ನೆರೆಯ ತಮಿಳುನಾಡಿನಲ್ಲಿ ಕೊರೋನಾ ಆರ್ಭಟ ಮತ್ತಷ್ಟು ಜೋರಾಗಿದ್ದು, ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಸುಮಾರು 15 ವೈದ್ಯರಿಗೇ ಸೋಂಕು ಪಸರಿಸಿದೆ ಎಂದು ತಿಳಿದುಬಂದಿದೆ.
ಸ್ಟಾನ್ಲಿ ಆಸ್ಪತ್ರೆ
ಸ್ಟಾನ್ಲಿ ಆಸ್ಪತ್ರೆ

ಚೆನ್ನೈ: ನೆರೆಯ ತಮಿಳುನಾಡಿನಲ್ಲಿ ಕೊರೋನಾ ಆರ್ಭಟ ಮತ್ತಷ್ಟು ಜೋರಾಗಿದ್ದು, ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಸುಮಾರು 15 ವೈದ್ಯರಿಗೇ ಸೋಂಕು ಪಸರಿಸಿದೆ ಎಂದು ತಿಳಿದುಬಂದಿದೆ.

ಚೆನ್ನೈನ ಪ್ರತಿಷ್ಠಿತ ಸ್ಟ್ಯಾನ್ಲಿ ಆಸ್ಪತ್ರೆಯಲ್ಲಿ 15 ವೈದ್ಯರಿಗೆ ಸೋಂಕು ದೃಢಪಟ್ಟಿದ್ದು, ಈ 15 ವೈದ್ಯರ ಪೈಕಿ 4 ಮಂದಿ ಹಿರಿಯ ವೈದ್ಯರು ಕೊರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. 9 ಮಂದಿ ವೈದ್ಯರು ಕೊರೋನಾ ಟಾಸ್ಕ್ ಫೋರ್ಸ್ ನಲ್ಲಿದ್ದು ಆಸ್ಪತ್ರೆಯ ಕೊರೋನಾ  ಸಭೆಗಳಿಗೆ ಹಾಜರಾಗುತ್ತಿದ್ದರು. ಇತರೆ ಇಬ್ಬರು ವೈದ್ಯರು ಪಿಜಿ ವೈದ್ಯರಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ಸೋಂಕಿಗೆ ತುತ್ತಾದ ಎಲ್ಲ ವೈದ್ಯರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯ ಕಾರ್ಯಾಚರಣೆ ಕೂಡ ಸ್ಥಗಿತವಾಗಿಲ್ಲ. ಎಲ್ಲವೂ ಸಾಮಾನ್ಯದಂತೆಯೇ ನಡೆಯುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಚೆನ್ನೈನ ರೋಯಾಪುರಂನಲ್ಲಿರುವ ಸ್ಟಾನ್ಲಿ ಆಸ್ಪತ್ರೆ ರೆಡ್ ಝೋನ್ ನಲ್ಲಿದ್ದು,  ಕಂಟೈನ್ ಮೆಂಟ್ ಝೋನ್ ಪ್ರದೇಶದಲ್ಲಿದೆ. ನಿತ್ಯ ಇಲ್ಲಿ ಸುಮಾರು 3 ಸಾವಿರದಿಂದ 4 ಸಾವಿರ ಮಂದಿ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ವೈದ್ಯರಿಗೆ ಹೇಗೆ ಸೋಂಕು ತಗುಲಿತು ಎಂಬ ಪ್ರಶ್ನೆಗೆ ಉತ್ತರ ಕಂಡು ಹಿಡಿಯಲಾಗುತ್ತಿಲ್ಲ. ಬಹುಶಃ ಆಸ್ಪತ್ರೆಗೆ ಬರುವ  ರೋಗಿಗಳಿಂದ ವೈದ್ಯರಿಗೂ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. 

ಇನ್ನು ಸ್ಟಾನ್ಲಿ ಆಸ್ಪತ್ರೆಯ ಎಲ್ಲ ವೈದ್ಯರಿಗೆ ಇದೀಗ ಅಗತ್ಯ ಮತ್ತು ಸೂಕ್ತ ಪಿಪಿಇ ಕಿಟ್ ಗಳನ್ನು ವಿತರಿಸಲಾಗಿದೆ. ಆಸ್ಪತ್ರೆಯ ಸಿಬ್ಬಂದಿಗಳು, ಆಡಳಿತ ಸಿಬ್ಬಂದಿಗಳಿಗೂ ಪಿಪಿಇ ಕಿಟ್ ಗಳನ್ನು ನೀಡಲಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಕೊರೋನಾ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು  ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಯುಜಿ ವಿದ್ಯಾರ್ಥಿಗಳ ಹಾಸ್ಟೆಲ್ ಅನ್ನು ಖಾಲಿ ಮಾಡಿಸಲಾಗಿದ್ದು, ಈ ಸ್ಥಳದಲ್ಲಿ ಇದೀಗ ಆಸ್ಪತ್ರೆಯ ವೈದ್ಯರನ್ನು ನಿಗಾದಲ್ಲಿ ಇರಿಸಲಾಗಿದೆ. ವೈರಸ್ ಸೋಂಕು ತಗುಲಿರುವ 15  ವೈದ್ಯರ ಪೈಕಿ 5 ಮಂದಿ ಮಹಿಳೆಯರಾಗಿದ್ದಾರೆ. 15 ಸೋಂಕು ಪೀಡಿತ ವೈದ್ಯರ ಪೈಕಿ 9 ಮಂದಿ ವೈದ್ಯರು ಆಸ್ಪತ್ರೆ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಗಳಾಗಿದ್ದು, ಅವರು ಎಂದಿಗೂ ಕೋವಿಡ್-19 ವಾರ್ಡ್ ಗೆ ಪ್ರವೇಶ ಮಾಡಿರಲಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ವೈರಸ್ ಸೋಂಕಿತ  ವೈದ್ಯರ ಸಂಪರ್ಕದಿಂದ ಇವರಿಗೆ ಸೋಂಕು ಪ್ರಸರಿಸಿರುವ ಶಂಕೆ ವ್ಯಕ್ತವಾಗಿದೆ. ವೈದ್ಯರು ಸಭೆ ನಡೆಸುತ್ತಿದ್ದ ಹಾಲ್ ನಲ್ಲಿ ಇತರೆ ವೈದ್ಯರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಪ್ರಸ್ತುತ ಆಸ್ಪತ್ರೆಯಲ್ಲಿ 744 ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಈ ಬಗ್ಗೆ ಮಾತನಾಡಿರುವ ಸ್ಟಾನ್ಲಿ ಆಸ್ಪತ್ಪೆಯ ಡೀನ್ ಡಾ. ಬಾಲಾಜಿ ಅವರು, ವೈದ್ಯರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಅಗತ್ಯವಿರುವಷ್ಟು ಪಿಪಿಇ ಕಿಟ್ ಗಳ ಸಾಕಷ್ಟು ದಾಸ್ತಾನಿದೆ. ಪ್ರಸ್ತುತ ಸೋಂಕಿಗೆ ತುತ್ತಾಗಿರುವ ವೈದ್ಯರನ್ನು ಪ್ರತ್ಯೇಕವಾಗಿರಿಸಲಾಗಿದೆ. ಉಳಿದ ವೈದ್ಯರು ನಿರಂತರವಾಗಿ  ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಬಗ್ಗೆ ಯಾವುದೇ ರೀತಿಯ ಕಳವಳ ಬೇಡ. ಕೊರೋನಾ ಸೋಂಕು ಪೀಡಿತ ಗಂಭೀರ ರೋಗಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com