13 ವರ್ಷದ ಬಾಲಕನಿಗೂ ಕೋವಿಡ್ ಲಸಿಕೆ ಪ್ರಮಾಣಪತ್ರ; ಲಸಿಕೆ ನೀಡಿಕೆಯಲ್ಲಿ ದಾಖಲೆ ಬರೆಯುತ್ತಿರುವ ಮಧ್ಯ ಪ್ರದೇಶದಲ್ಲಿ ಗೋಲ್ ಮಾಲ್!

ಲಸಿಕೆ ನೀಡಿಕೆಯಲ್ಲಿ ದಾಖಲೆ ಬರೆಯುತ್ತಿರುವ ಮಧ್ಯ ಪ್ರದೇಶದಲ್ಲಿ ಮಹಾ ಎಡವಟ್ಟುಗಳ ಸರಣಿ ಆರಂಭವಾಗಿದ್ದು, ಲಸಿಕೆ ನೀಡದವರಿಗೂ ಲಸಿಕಾ ಪ್ರಮಾಣ ಪತ್ರಗಳು ದೊರೆಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಭೋಪಾಲ್: ಲಸಿಕೆ ನೀಡಿಕೆಯಲ್ಲಿ ದಾಖಲೆ ಬರೆಯುತ್ತಿರುವ ಮಧ್ಯ ಪ್ರದೇಶದಲ್ಲಿ ಮಹಾ ಎಡವಟ್ಟುಗಳ ಸರಣಿ ಆರಂಭವಾಗಿದ್ದು, ಲಸಿಕೆ ನೀಡದವರಿಗೂ ಲಸಿಕಾ ಪ್ರಮಾಣ ಪತ್ರಗಳು ದೊರೆಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅದರಲ್ಲೂ ಪ್ರಮುಖವಾಗಿ ಕೇಂದ್ರ ಸರ್ಕಾರ 18 ವರ್ಷದೊಳಗಿನವರಿಗೆ ಲಸಿಕೆ ನೀಡುವ ಕುರಿತು ಅನುಮೋದನೆಯನ್ನೇ ನೀಡಿಲ್ಲ.. ಆದರೂ 13 ವರ್ಷದ ಬಾಲಕನಿಗೆ ಕೋವಿಡ್ ಲಸಿಕೆ ಹಾಕಿರುವ ಕುರಿತು ಪ್ರಮಾಣ ಪತ್ರವನ್ನು ಮತ್ತು ಮೆಸೇಜ್ ಕಳುಹಿಸಲಾಗಿದೆ. ಕಳೆದ ಸೋಮವಾರ ರಾತ್ರಿ 7:27ಕ್ಕೆ ತಮ್ಮ  ಮೊಬೈಲ್‌ ಫೋನ್ ಗೆ ಬಂದ ಸರ್ಕಾರಿ ಮೆಸೇಜ್ ನೋಡಿ ರಜತ್ ಡಾಂಗ್ರೆ ದಂಗಾದರು. ಏಕೆಂದರೆ ಇವರ ಹದಿಮೂರು ವರ್ಷದ ಮಗ ಕೋವಿಡ್-19 ಲಸಿಕೆ ಪಡೆದ ಮಾಹಿತಿ ನೀಡುವ ಮೆಸೇಜ್ ಅದಾಗಿತ್ತು. ಇದೊಂದೇ ಅಲ್ಲ ಮಧ್ಯ ಪ್ರದೇಶದಲ್ಲಿ ಇಂತಹ ಹಲವು ಲಸಿಕೆ ಮಹಾ ಎಡವಟ್ಟುಗಳ ಬೆಳಕಿಗೆ ಬರುತ್ತಿವೆ.  ಭೋಪಾಲ್‌ನ ತಿಲ ಜಮಾಲ್‌ಪುರ ಹೌಸಿಂಗ್‌ ಬೋರ್ಡ್ ಕಾಲನಿಯ ನಿವಾಸಿ ವೇದಾಂತ ಡಾಂಗ್ರೆಗೆ ಇನ್ನೂ ಹದಿಮೂರು ವರ್ಷ. ಅಂಗವಿಕಲನಾದ ಆತನಿಗೆ ಅಧಿಕೃತವಾಗಿ ಲಸಿಕೆ ನೀಡಲಾಗಿದೆ ಎಂಬ ಸಂದೇಶದಲ್ಲಿ ಈತನ ವಯಸ್ಸು 56 ವರ್ಷ ಎಂದು ನಮೂದಾಗಿದೆ.

ಈ ಬಗ್ಗೆ ಮಾತನಾಡಿರುವ ತಂದೆ ರಜತ್, 'ಜೂನ್ 21ರಂದು ಸಂಜೆ ವೇದಾಂತ್ ಲಸಿಕೆ ಪಡೆದ ಬಗ್ಗೆ ನನಗೆ ಸಂದೇಶ ಬಂತು. ಆತನಿಗೆ ಇನ್ನೂ 13 ವರ್ಷ. ಈ ಬಗ್ಗೆ ದೂರು ನೀಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದು ಹೇಳಿದ್ದಾರೆ.

ಸರ್ಕಾರ ಕಚೇರಿಗೆ ಕೊಟ್ಟ ದಾಖಲೆಗಳನ್ನೇ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳು
ಇನ್ನು ಲಸಿಕೆ ಪ್ರಮಾಣಪತ್ರದ ಲಿಂಕ್ ಬಳಸಿಕೊಂಡು ಪ್ರಮಾಣಪತ್ರ ಡೌನ್‌ಲೋಡ್ ಮಾಡಿದಾಗ, ನಾನು ಕೆಲ ದಿನಗಳ ಹಿಂದೆ ಪಾಲಿಕೆಯಲ್ಲಿ ವಿಶೇಷ ಅಗತ್ಯತೆಯವರಿಗಾಗಿ ಲಭ್ಯವಿರುವ ಪಿಂಚಣಿಗೆ ಸಲ್ಲಿಸಿದ್ದ ಅರ್ಜಿಯ ಜತೆಗಿನ ದಾಖಲೆಗಳನ್ನು ಅವರು ಬಳಸಿಕೊಂಡಿದ್ದು ಗಮನಕ್ಕೆ ಬಂತು ರಜತ್ ಎಂದು   ವಿವರಿಸಿದ್ದಾರೆ. ಒಂದೇ ದಿನ 17.42 ಲಕ್ಷ ಡೋಸ್ ನೀಡಿ ಮಧ್ಯಪ್ರದೇಶ ಜೂನ್ 21ರಂದು ದಾಖಲೆ ಸೃಷ್ಟಿಸಿತ್ತು. ಆದರೆ ಈಗ ಲಸಿಕೆ ಪಡೆಯದವರಿಗೂ ಲಸಿಕೆ ಪಡೆದ ಬಗ್ಗೆ ಪ್ರಮಾಣಪತ್ರಗಳು ಬಂದಿರುವ ದೂರುಗಳು ಹೆಚ್ಚುತ್ತಿವೆ. ಇದೇ ದಿನ ವೇದಾಂತ್‌ನಂತೆ ಸಾತ್ನಾದ ಚೈನೇಂದ್ರ ಪಾಂಡೆ ಅವರಿಗೂ ಐದು  ನಿಮಿಷಗಳಲ್ಲಿ ಮೂರು ಸಂದೇಶಗಳು ಬಂದಿದ್ದವು. ಇದರಲ್ಲಿ ಅವರಿಗೆ ಪರಿಚಯವೇ ಇಲ್ಲದ ಕತಿಕ್‌ರಾಂ, ಕಲೀಂದ್ರಿ ಮತ್ತು ಚಂದನ್ ಅವರಿಗೆ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಇತ್ತು. ಈ ಮೆಸೇಜ್ ತನ್ನ ಮೊಬೈಲಿಗೆ ಹೇಗೆ ಮತ್ತು ಏಕೆ ಬಂದಿದೆ ಎನ್ನುವುದು ಅವರಿಗೆ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಭೋಪಾಲ್‌ನ ಪಿಜಿಬಿಟಿ ಕಾಲೇಜು ರಸ್ತೆಯ ನುಝತ್ ಸಲೀಂ (46) ಅವರಿಗೂ ಲಸಿಕೆ ಪಡೆದ ಬಗ್ಗೆ ಸಂದೇಶ ಬಂದಿದೆ. ಆಕೆ ಪಿಂಚಿಣಿ ಪಡೆಯುವವರಲ್ಲದಿದ್ದರೂ, ಪಿಂಚಣಿ ದಾಖಲೆಯನ್ನು ಗುರುತಿನ ಪತ್ರವಾಗಿ ನೀಡಿದ ಉಲ್ಲೇಖವಿದೆ. ಜೂ.21ರಂದು ನನಗೂ ಮೆಸೇಜ್​ ಬಂತು. ನೀವು ಲಸಿಕೆ ಪಡೆದಿದ್ದೀರಿ ಎಂದು  ಹೇಳಿದರು. ಆದರೆ ನಾನು ಇದುವರೆಗೂ ಲಸಿಕೆ ಪಡೆದಿಲ್ಲ ಎಂದಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ. ಈ ಬಗ್ಗೆ ಸ್ಪಷ್ಟನೆ ಕೇಳಲು, ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಹಾಗೆಲ್ಲ ಯಾವುದೇ ಸಮಸ್ಯೆಯಾಗಿಲ್ಲ. ನಿಮಗೆ ಎಲ್ಲಿಂದ ಮಾಹಿತಿ ಸಿಕ್ಕಿತೋ ಗೊತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಲಸಿಕೆ ನೀಡಿಕೆಯಲ್ಲಿ ಮಧ್ಯ ಪ್ರದೇಶ ದಾಖಲೆ
ಜೂ.21ರಿಂದ ಕೊವಿಡ್​ 19 ಲಸಿಕೆಗೆ ಸಂಬಂಧಪಟ್ಟ ಹೊಸ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಹಾಗೇ ಅಂದು ಒಟ್ಟಾರೆ 88 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಿದ್ದು ದಾಖಲೆಯೇ ಸರಿ.  ಜೂ.21ರಂದು ಇಡೀ ದೇಶದ್ದು ಒಂದು ದಾಖಲೆಯಾದರೆ, ಅಂದು ಮಧ್ಯಪ್ರದೇಶ 17.42 ಲಕ್ಷ ಜನರಿಗೆ  ಕೊವಿಡ್​ 19 ಲಸಿಕೆ ಕೊಡುವ ಮೂಲಕ ದೇಶದಲ್ಲೇ ಅತ್ಯಂತ ಹೆಚ್ಚು ಜನರಿಗೆ ಲಸಿಕೆ ಕೊಟ್ಟ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು. ಆದರ ಈಗ ಕೆಲವು ಆರೋಪಗಳು ಕೇಳಿಬರುತ್ತಿವೆ. ಲಸಿಕೆಯನ್ನೇ ಪಡೆಯದವರಿಗೂ ಸಹ, ನೀವು ಲಸಿಕೆ ಪಡೆದಿದ್ದೀರಿ ಎಂದು ಸಂದೇಶ ಕಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com