ಉತ್ತರ ಭಾರತದಲ್ಲಿ ಗಗನಕ್ಕೇರಿದ ತರಕಾರಿಗಳ ಬೆಲೆ: ತೈಲ ಬೆಲೆಯೇರಿಕೆ ಮತ್ತು ಅತಿವೃಷ್ಟಿ ಕಾರಣ

ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ 1 ಕೆ.ಜಿ ನೀರುಳ್ಳಿ ಬೆಲೆ ಅರ್ಧ ಶತಕ ದಾಟಿದ್ದು, ಟೊಮೆಟೊ ಬೆಲೆ 40 ರೂ. ನಿಂದ 80 ರೂ.ಗಳಿಗೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಈಗಾಗಲೇ ತೈಲ ಬೆಲೆಯೇರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅದರ ನಡುವೆಯೇ ಗಾಯದ ಮೇಲೆ ಬರೆ ಎಳೆಯುವಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತರಕಾರಿಗಳ ಬೆಲೆಯೂ ಗಗನಕ್ಕೇರಿದೆ. 

ಅಕಾಲಿಕ ಮಳೆಯಿಂದ ಬೇಸಗೆ ಬೆಳೆ ಹಾನಿಯಾಗಿದ್ದರಿಂದಾಗಿ ನೀರುಳ್ಳಿ, ಆಲೂಗೆಡ್ಡೆ, ಟೊಮೆಟೊ ಬೆಲೆ ಹೆಚ್ಚಳ ಕಂಡಿದೆ. ಹಲವು ರಾಜ್ಯಗಳಲ್ಲಿ ಕಳೆದ 2 ವಾರಗಳಿಂದ ತರಕಾರಿ ಬೆಲೆ ಏರುತ್ತಲೇ ಇದೆ. 

ಉತ್ತರಪ್ರದೇಶದಲ್ಲಿ 60 ರೂ.ಗಳಿಗೆ ಮಾರಾಟವಾಗುತ್ತಿದ್ದ ಒಂದು ಕೆ.ಜಿ ಟೊಮೆಟೊ ಬೆಲೆ 15 ರೂ. ಹೆಚ್ಚಳ ಕಂಡಿದೆ. ನೀರುಳ್ಳಿ ಬೆಲೆ 20 ರೂ. ಹೆಚ್ಚಳ ಕಂಡಿದೆ. 

ಈಗ ದಸರಾ ಹಬ್ಬದ ಸಂದರ್ಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚುವುದರಿಂದಾಗಿ ತರಕಾರಿಗಳ ಬೆಲೆ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಇರುವುದಾಗಿ ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ. 

ನೀರುಳ್ಳಿ ಸ್ಟಾಕ್ ಕಡಿಮೆಯಿದ್ದು, ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ತೈಲ ಬೆಲೆಯೂ ಏರಿರುವುದರಿಂದ ತರಕಾರಿ ಸಾಗಣೆ ವೆಚ್ಚವೂ ದುಬಾರಿಯಾಗಿ ಪರಿಣಮಿಸಿದೆ ಎಂದು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ 1 ಕೆ.ಜಿ ನೀರುಳ್ಳಿ ಬೆಲೆ ಅರ್ಧ ಶತಕ ದಾಟಿದ್ದು, ಟೊಮೆಟೊ ಬೆಲೆ 40 ರೂ. ನಿಂದ 80 ರೂ.ಗಳಿಗೆ ಏರಿಕೆಯಾಗಿದೆ. ಬಟಾಣಿ ಕೆ.ಜಿಗೆ 120 ರೂ. ಹೂಕೋಸು ಕೆ.ಜಿಗೆ 100 ರೂ.ಗಳಿಗೆ ಮಾರಾಟವಾಗುತ್ತಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚಿಗಷ್ಟೆ ದಿನೇ ದಿನೇ ಏರುತ್ತಿರುವ ತೈಲ ಬೆಲೆಯ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಮಿಕ್ಕ ಕ್ಷೇತ್ರಗಳ ಮೇಲೆ ಇಂಧನ ಬೆಲೆಯೇರಿಕೆಯ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com