ಮುಂಬೈನಲ್ಲಿ ಕೋವಿಡ್ ಡೆಲ್ಟಾ ಪ್ಲಸ್​ ಸೋಂಕಿಗೆ ಮೊದಲ ಬಲಿ; 2 ಡೋಸ್ ಕೋವಿಡ್ ಲಸಿಕೆ ಪಡೆದಿದ್ದ ಮಹಿಳೆ ಸಾವು

ಸಂಭಾವ್ಯ ಕೊರೋನಾ 3ನೇ ಅಲೆ ಹಾಗೂ ಕೋವಿಡ್ ಸೋಂಕು ದಿನ ನಿತ್ಯ ಹಾವು ಏಣಿ ಆಟ ಆಡುತ್ತಿರುವ ನಡುವಲ್ಲೇ ಮುಂಬೈನಲ್ಲಿ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿ ವೈರಸ್'ಗೆ ಮೊಟ್ಟ ಮೊದಲ ಬಲಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಹಾರಾಷ್ಟ್ರ: ಸಂಭಾವ್ಯ ಕೊರೋನಾ 3ನೇ ಅಲೆ ಹಾಗೂ ಕೋವಿಡ್ ಸೋಂಕು ದಿನ ನಿತ್ಯ ಹಾವು ಏಣಿ ಆಟ ಆಡುತ್ತಿರುವ ನಡುವಲ್ಲೇ ಮುಂಬೈನಲ್ಲಿ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿ ವೈರಸ್'ಗೆ ಮೊಟ್ಟ ಮೊದಲ ಬಲಿಯಾಗಿದೆ.

63 ವರ್ಷದ ಮಹಿಳೆ ಡೆಲ್ಟಾ ಪ್ಲಸ್ ಕೋವಿಡ್ ಸೋಂಕಿನಿಂದ ಸಾವಿಗೀಡಾಗಿದ್ದು, ಅವರು 2 ಡೋಸ್​ ಕೊರೊನಾ ಲಸಿಕೆಯನ್ನು ತೆಗೆದುಕೊಂಡಿದ್ದರಾದರೂ ಇನ್ನಿತರ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಕಳೆದ ತಿಂಗಳು ರತ್ನಗಿರಿಯ 80 ವರ್ಷದ ಮಹಿಳೆ ಸಾವನ್ನಪ್ಪಿದ ನಂತರ ಇದು ಡೆಲ್ಟಾ ಪ್ಲಸ್ ನಿಂದ ಮಹಾರಾಷ್ಟ್ರದ ಎರಡನೇ ಸಾವಾಗಿದೆ ಎಂದು ವರದಿಗಳು ತಿಳಿಸಿದೆ. 

ಮುಂಬೈನ ನಾಗರಿಕ ಸಂಸ್ಥೆ ಬಿಎಂಸಿ (ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್) ಈ ಕುರಿತು ಮಾಹಿತಿ ನೀಡಿದೆ. 

63 ವರ್ಷದ ಮಹಿಳೆ ಜುಲೈ 21 ರಂದು ಕೋವಿಡ್  19 ಪಾಸಿಟಿವ್ ಗೆ ಒಳಗಾಗಿದ್ದರು. ಜುಲೈ 27 ರಂದು ಸೋಂಕಿಗೆ ಬಲಿಯಾಗಿದ್ದರು. ಸೋಂಕಿನಿಂದ ಮೃತಪಟ್ಟ ಮಹಿಳೆಗೆ ಕೋವಿಡ್ ಸೋಂಕಿನ ಲಸಿಕೆಯ ಎರಡೂ ಡೋಸ್ ಗಳನ್ನು ನೀಡಲಾಗಿತ್ತು. ಯಾವುದೇ ಟ್ರಾವೆಲಿಂಗ್ ಹಿಸ್ಟರಿ ಮಹಿಳೆಗೆ ಇಲ್ಲ. ಆದಾಗ್ಯೂ, ಮಹಿಳೆ ಕೆಲವು ವರ್ಷಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತ ಮಹಿಳೆಯ ಜೀನೋಮ್ ಸೀಕ್ವೆನ್ಸಿಂಗ್ ವರದಿಯನ್ನು ಇತ್ತೀಚೆಗೆ ಪಡೆದಿತ್ತು, ವರದಿಯ ಪ್ರಕಾರ, ಮೃತ ಮಹಿಳೆ ಡೆಲ್ಟಾ ಪ್ಲಸ್  ಕೋವಿಡ್ ರೂಪಾಂತರಿ ಸೋಂಕಿಗೆ ಒಳಗಾಗಿದ್ದರು ಎಂದು ಸೂಚಿಸಿದೆ ಎಂದು ಬಿಎಂಸಿ ತಿಳಿಸಿದೆ.

ಈ ನಡುವೆ, ಆಕೆಯ ಕುಟುಂಬದ ಆರು ಮಂದಿ ಕೂಡ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಆ ಪೈಕಿ ಇನ್ನೊಬ್ಬರು ಕೂಡ ಡೆಲ್ಟಾ ಪ್ಲಸ್ ಸೋಂಕಿಗೆ ಒಳಗಾಗಿದ್ದಾರೆ. ಇನ್ನುಳಿದ ನಾಲ್ವರ ಜೀನೋಮ್ ಸೀಕ್ವೆನ್ಸಿಂಗ್ ಇನ್ನಷ್ಟೇ  ಬರಬೇಕಿದೆ ಎಂದು ತಿಳಿಸಿದೆ.

2 ದಿನಗಳ ಹಿಂದಷ್ಟೇ ಮಾಹಿತಿ ನೀಡಿದ್ದ ಮಹಾರಾಷ್ಟ್ರ ಆರೋಗ್ಯ ಇಲಾಖೆ, ಡೆಲ್ಟಾ ಪ್ಲಸ್​ ಸೋಂಕಿತರ ಪೈಕಿ ಹೊಸದಾಗಿ ಪತ್ತೆಯಾದ 20 ಮಂದಿಯಲ್ಲಿ 7 ಜನ ಮುಂಬೈ, 3 ಜನ ಪುಣೆ, ಹಾಗೂ ನಾಂದೇಡ್​, ಗೋಂದಿಯಾ, ರಾಯ್​ಗಡ, ಪಲ್​ಘರ್​ನಲ್ಲಿ ತಲಾ ಇಬ್ಬರು, ಚಂದ್ರಾಪುರ ಹಾಗೂ ಅಕೋಲಾದಲ್ಲಿ ತಲಾ ಒಬ್ಬರು ಸೋಂಕಿತರು ಪತ್ತೆಯಾಗಿದ್ದಾರೆಂದು ತಿಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com