ಯೂಟ್ಯೂಬ್​ ನೋಡಿ ಪತ್ನಿಗೆ ಹೆರಿಗೆ ಮಾಡಲು ಮುಂದಾದ ಪತಿ: ಮಗು ಸಾವು, ಮಹಿಳೆ ಸ್ಥಿತಿ ಗಂಭೀರ!

ಪತಿಯೊಬ್ಬ ತನ್ನ ಹೆಂಡತಿಯ ಹೆರಿಗೆಯನ್ನು ಯೂಟ್ಯೂಬ್​​ನಲ್ಲಿ ವಿಡಿಯೋ ನೋಡುತ್ತಾ ಮಾಡಲು ಮುಂದಾದ ಪರಿಣಾಮ, ಶಿಶು ಸಾವನ್ನಪ್ಪಿದೆ. ಅಲ್ಲದೇ 28 ವರ್ಷದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನವಜಾತ ಶಿಶು (ಸಾಂಕೇತಿಕ ಚಿತ್ರ)
ನವಜಾತ ಶಿಶು (ಸಾಂಕೇತಿಕ ಚಿತ್ರ)

ರಾಣಿಪೇಟೆ: ವ್ಯಕ್ತಿಯೊಬ್ಬ ಯೂಟ್ಯೂಬ್ ವಿಡಿಯೋ ಸಹಾಯದಿಂದ ತನ್ನ ಪತ್ನಿಯ ಹೆರಿಗೆ ಮಾಡಲು ಯತ್ನಿಸಿದ ಪರಿಣಾಮ, ಶಿಶು ಸಾವನ್ನಪ್ಪಿದೆ. ಅಲ್ಲದೇ 28 ವರ್ಷದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ತಮಿಳುನಾಡಿನ ರಾಣಿಪೇಟೆಯಲ್ಲಿ ನಡೆದಿದೆ. ಮಹಿಳೆ ಹೆಸರು ಗೋಮತಿ ಎಂದು ತಿಳಿದುಬಂದಿದ್ದು, ಹೆರಿಗೆ ಸಮಯದಲ್ಲಿ ಅಪಾರ ರಕ್ತಸ್ರಾವವಾಗಿದೆ. ಹಾಗಾಗಿ ಮಗು ಹುಟ್ಟುವ ಸಮಯದಲ್ಲಿ ಆಕೆ ಪ್ರಜ್ಞಾಹೀನಳಾಗಿದ್ದು, ಬಳಿಕ ಗೋಮತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಮತಿಯ ಪತಿ ಲೋಗನಾಥನ್ ಅವರು ವೈದ್ಯಕೀಯ ಸಹಾಯ ಪಡೆಯುವ ಬದಲು, ಮನೆಯಲ್ಲಿಯೇ ಹೆರಿಗೆ ಮಾಡಿದ್ದಾರೆ ಎಂದು ಪ್ರಾಥಮಿಕ ಆರೋಗ್ಯ ಅಧಿಕಾರಿ ಮೋಹನ್ ದೂರು ದಾಖಲಿಸಿದ್ದಾರೆ.

ಒಂದು ವರ್ಷದ ಹಿಂದೆ ಲೋಗನಾಥನ್ ಮತ್ತು ಗೋಮತಿ ವಿವಾಹವಾಗಿದ್ದರು. ಅವರು ಡಿಸೆಂಬರ್ 13 ರಂದು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಡಿಸೆಂಬರ್ 18 ರ ನಂತರ ಗೋಮತಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಲೋಗನಾಥನ್ ತನ್ನ ಸಹೋದರಿ ಗೀತಾಳ ಸಹಾಯವನ್ನು ಕೋರಿದ್ದು, ಯೂಟ್ಯೂಬ್​ನಲ್ಲಿ ವಿಡಿಯೋ ನೋಡಿಕೊಂಡು ಹೆರಿಗೆ ಮಾಡಲು ಪ್ರಯತ್ನಿಸಿದ್ದಾನೆ.

ಗೋಮತಿ ಅವರನ್ನು ಪುನ್ನೈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (PHC) ಕರೆದೊಯ್ಯಲಾಯಿತು. ನಂತರ ಆಕೆಯನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಶಿಶು ಸಾವು ಸೇರಿದಂತೆ ಸಂಪೂರ್ಣ ಘಟನೆ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com