ಎಲ್‌ಎಸಿಯಲ್ಲಿ ಶಾಂತಿ ಸ್ಥಾಪನೆಗೆ ಆದ್ಯತೆ: ದುಶಾಂಬೆಯಲ್ಲಿ ಜೈಶಂಕರ್‌-ವಾಂಗ್‌ ಭೇಟಿ, ಮಾತುಕತೆ

ಲಡಾಖ್ ಗಡಿ ಸಂಘರ್ಷದ ವಿಚಾರ ಸಂಬಂಧ ಭಾರತ ಹಾಗೂ ಚೀನಾದ ವಿದೇಶಾಂಗ ಸಚಿವರು ಮಾತುಕತೆ ನಡೆಸಿದ್ದು, ಉಭಯ ರಾಷ್ಟ್ರಗಳು ಎಲ್‌ಎಸಿಯಲ್ಲಿ ಶಾಂತಿ ಸ್ಥಾಪನೆಗೆ ಆದ್ಯತೆ ನೀಡಲು ಒಪ್ಪಿಗೆ ನೀಡಿವೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಲಡಾಖ್ ಗಡಿ ಸಂಘರ್ಷದ ವಿಚಾರ ಸಂಬಂಧ ಭಾರತ ಹಾಗೂ ಚೀನಾದ ವಿದೇಶಾಂಗ ಸಚಿವರು ಮಾತುಕತೆ ನಡೆಸಿದ್ದು, ಉಭಯ ರಾಷ್ಟ್ರಗಳು ಎಲ್‌ಎಸಿಯಲ್ಲಿ ಶಾಂತಿ ಸ್ಥಾಪನೆಗೆ ಆದ್ಯತೆ ನೀಡಲು ಒಪ್ಪಿಗೆ ನೀಡಿವೆ ಎಂದು ತಿಳಿದುಬಂದಿದೆ. 

ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ಶಾಂಘೈ ಸಹಕಾರ ಒಕ್ಕೂಟದ ಸಭೆಯ ನಂತರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು, ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಜತೆಗೆ ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. 

ಮಾತುಕತೆ ವೇಳೆ ಪೂರ್ವ ಲಡಾಖ್​ನ ಪ್ಯಾಂಗಾಂಗ್ ಸರೋವರ ಪ್ರದೇಶಗಳಿಂದ ಎರಡೂ ಕಡೆಯ ಸೇನೆಗಳನ್ನ ವಾಪಸ್ ಕರೆಸಿಕೊಳ್ಳಬೇಕೆಂದು ಫೆಬ್ರವರಿಯಲ್ಲಿ ನಿರ್ಧಾರವಾದರೂ ಚೀನಾದಿಂದ ಯಾವುದೇ ಸಕಾರಾತ್ಮಕ ಪ್ರಯತ್ನವಾಗಿಲ್ಲ. ಇದರಿಂದ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಕ್ಕೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಚೀನಾದ ಮಂತ್ರಿಗೆ ಗಡಿಭಾಗದ ಸೂಕ್ಷ್ಮ ಸ್ಥಿತಿಯನ್ನು ವಿವರಿಸಿದ್ದಾರೆ. 

ಭಾರತ ಮತ್ತು ಚೀನಾದ ವಾಸ್ತವ ಗಡಿ ರೇಖೆ (ಎಲ್ಎಸಿ) ಯಲ್ಲಿ ಏಪಕ್ಷೀಯವಾಗಿ ಏನಾದರೂ ಬದಲಾವಣೆ ಮಾಡಲು ಹೋದರೆ ಅದನ್ನ ಭಾರತ ಸಹಿಸುವುದಿಲ್ಲ. ಪೂರ್ವ ಲಡಾಖ್​ನಲ್ಲಿ ಶಾಂತಿಯುತ ವಾತಾವರಣ ಮರುನಿರ್ಮಾಣ ಆಗುವವರೆಗೂ ಎರಡೂ ದೇಶಗಳ ಒಟ್ಟಾರೆ ಸಂಬಂಧಕ್ಕೆ ಪುಷ್ಟಿ ಸಿಗಲು ಸಾಧ್ಯ ಎಂದು ಎಸ್ ಜೈಶಂಕರ್ ಅವರು ಸ್ಪಷ್ಟಪಡಿಸಿದ್ದಾರೆ.

ದ್ವಿಪಕ್ಷೀಯ ಒಪ್ಪಂದ ಮತ್ತು ಪ್ರೋಟೊಕಾಲ್​ಗಳಿಗೆ ಸಂಪೂರ್ಣ ಬದ್ಧವಾಗಿದ್ದು ಪೂರ್ವ ಲಡಾಖ್​ನ ಎಲ್​ಎಸಿಯಾದ್ಯಂತ ಉಳಿದಿರುವ ಎಲ್ಲಾ ಸಮಸ್ಯೆಗೆ ಬೇಗ ಪರಿಹಾರ ಕಂಡುಕೊಳ್ಳುವುದು ಎರಡೂ ದೇಶಗಳಿಗೆ ಒಳಿತು ಎಂದು ವ್ಯಾಂಗ್ ಯಿ ಅವರಿಗೆ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆಂದು ಭಾರತದ ವಿದೇಶ ವ್ಯವಹಾರಗಳ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ರಷ್ಯಾದ ಮಾಸ್ಕೋ ನಗರದಲ್ಲಿ ನಡೆದ ಇದೇ ಎಸ್​ಸಿಒ ಸಭೆಯಲ್ಲಿ ಈ ಎರಡು ಸಚಿವರು ಭೇಟಿಯಾಗಿದ್ದನ್ನ ಇಲ್ಲಿ ಸ್ಮರಿಸಬಹುದು. ಅಂದು ಭಾರತ ಚೀನಾ ಗಡಿಬಿಕ್ಕಟ್ಟನ್ನು ಶಮನಗೊಳಿಸಲು 5 ಗಳ ಒಪ್ಪಂದಕ್ಕೆ ಬರಲಾಗಿತ್ತು. 

ಗಡಿಬಿಕ್ಕಟ್ಟಿಗೆ ಕಾರಣವಾದ ಸ್ಥಳಗಳಿಂದ ಸೇನೆಗಳನ್ನ ಹಿಂದಕ್ಕೆ ಕರೆಸಿಕೊಳ್ಳುವುದು, ತಿಕ್ಕಾಟಕ್ಕೆ ಕಾರಣವಾಗುವ ಕಾರ್ಯಗಳನ್ನ ಕೈಬಿಡುವುದು, ಹಿಂದಿನ ಎಲ್ಲಾ ಒಪ್ಪಂದಗಳಿಗೆ ಬದ್ಧವಾಗಿರುವುದು ಹೀಗೆ ಐದು ಅಂಶಗಳನ್ನ ಅನುಸರಿಸಲು ನಿರ್ಧರಿಸಲಾಗಿತ್ತು.

ಒಪ್ಪಂದದ ಬಳಿಕ ಪ್ಯಾಂಗಾಂಗ್ ಸರೋವರದ ಸ್ಥಳಗಳಿಂದ ಚೀನಾ ದೇಶದ ಸೇನೆಗಳು ವಾಪಸ್ ಹೋದವು. ಆದರೆ, ನಂತರ ಚೀನಾದ ಧೋರಣೆ ಬದಲಾಯಿತು. 

ಪೂರ್ವ ಲಡಾಖ್​ನ ಎಲ್​ಎಸಿ ಗಡಿಭಾಗದಲ್ಲಿ ಬೇರೆ ಸೂಕ್ಷ್ಮ ಸ್ಥಳಗಳಿಂದ ಚೀನಾ ಕಾಲ್ತೆಗೆಯುವ ಮನಸ್ಸು ಮಾಡಿಲ್ಲ. ಈ ಪ್ರದೇಶದಲ್ಲಿ ವಾತಾವರಣ ಇನ್ನೂ ಉದ್ವಿಗ್ನವಾಗಿಯೇ ಇದೆ. 

ಈ ವಿಚಾರವನ್ನೂ ದುಶಾಂಬೆಯಲ್ಲಿ ಚೀನಾ ಬಳಿ ಎಸ್ ಜೈಶಂಕರ್ ತಿಳಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ.

ಚೀನಾದ ವಿದೇಶಾಂಗ ಸಚಿವ ವ್ಯಾಂಗ್ ಯಿ ಅವರು ಜೈಶಂಕರ್ ಮಾತಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆಂದು ಹೇಳಲಾಗುತ್ತಿದ್ದು, ಆದಷ್ಟೂ ಶೀಘ್ರದಲ್ಲಿ ಭಾರತ ಮತ್ತು ಚೀನಾ ಮಧ್ಯೆ ಮತ್ತೊಂದು ಸುತ್ತಿನ ಮಿಲಿಟರಿ ಮಾತುಕತೆ ಏರ್ಪಡಿಸಲು ಇಬ್ಬರೂ ಒಪ್ಪಿಕೊಂಡಿದ್ದಾರೆನ್ನಲಾಗುತ್ತಿದೆ. 

ಮಾತುಕತೆ ಕುರಿತು ಜೈಶಂಕರ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಚೀನಾದೊಂದಿಗೆ ಎಲ್‌ಎಸಿ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಿದ್ದಾಗಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com