ಬಿಜೆಪಿ ನಾಯಕನಿಗೆ 5 ಡೋಸ್ ಕೋವಿಡ್ ಲಸಿಕೆ, 2022 ಕ್ಕೆ 6ನೇ ಡೋಸ್ ನಿಗದಿ

ಬಿಜೆಪಿಯ ನಾಯಕರೊಬ್ಬರು ಲಸಿಕೆ ಪಡೆದ ಪ್ರಮಾಣಪತ್ರ ಡೌನ್ ಲೋಡ್ ಮಾಡಿದಾಗ ಆತನಿಗೆ ಶಾಕ್ ಕಾದಿತ್ತು. ಏಕೆಂದರೆ ಪಡೆದಿರುವುದು 2 ಡೋಸ್ ಲಸಿಕೆಯಾದರೂ ಪ್ರಮಾಣಪತ್ರದಲ್ಲಿ ತೋರಿಸುತ್ತಿರುವುದು 5 ಡೋಸ್!! 
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ಲಖನೌ: ಬಿಜೆಪಿಯ ನಾಯಕರೊಬ್ಬರು ಲಸಿಕೆ ಪಡೆದ ಪ್ರಮಾಣಪತ್ರ ಡೌನ್ ಲೋಡ್ ಮಾಡಿದಾಗ ಆತನಿಗೆ ಶಾಕ್ ಕಾದಿತ್ತು. ಏಕೆಂದರೆ ಪಡೆದಿರುವುದು 2 ಡೋಸ್ ಲಸಿಕೆಯಾದರೂ ಪ್ರಮಾಣಪತ್ರದಲ್ಲಿ ತೋರಿಸುತ್ತಿರುವುದು 5 ಡೋಸ್!! 

ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸರ್ಧಾನ ಪ್ರದೇಶದ ರಾಮ್ ಪಾಲ್ ಸಿಂಗ್ (73) 79 ನೇ ಬೂತ್ ನಂಬರ್ ನ ಬಿಜೆಪಿ ಅಧ್ಯಕ್ಷರಾಗಿದ್ದು, ಹಿಂದು ಯುವ ವಾಹಿನಿಯ ಸದಸ್ಯರೂ ಆಗಿದ್ದಾರೆ.

ರಾಮ್ ಪಾಲ್ ಸಿಂಗ್ ಅವರು ಡೌನ್ ಲೋಡ್ ಮಾಡಿದ್ದ ಲಸಿಕೆ ಪ್ರಮಾಣಪತ್ರದಲ್ಲಿ 5 ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ತೋರಿಸುತ್ತಿದೆ. ಅದಷ್ಟೇ ಅಲ್ಲದೇ 2021 ರ ಡಿಸೆಂಬರ್ ನಿಂದ ಜನವರಿ 2022 ರ ಅವಧಿಯಲ್ಲಿ 6 ನೇ ಡೋಸ್ ಲಸಿಕೆಯೂ ನಿಗದಿಯಾಗಿದೆ.

ರಾಮ್ ಪಾಲ್ ಸಿಂಗ್ ಆರೋಗ್ಯ ಇಲಾಖೆ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

ಸಿಂಗ್ ನೀಡಿರುವ ಮಾಹಿತಿಯ ಪ್ರಕಾರ ಮಾರ್ಚ್ 16 ರಂದು ಮೊದಲ ಡೋಸ್ ಲಸಿಕೆ ಪಡೆದಿದ್ದರು. ಎರಡನೇ ಡೋಸ್ ಲಸಿಕೆಯನ್ನು ಮೇ.08 ರಂದು ಪಡೆದಿದ್ದರು.

ಸರ್ಟಿಫಿಕೇಟ್ ನಲ್ಲಿ ಮೊದಲ ಡೋಸ್ ಲಸಿಕೆ ಮಾರ್ಚ್ 16 ಕ್ಕೆ, ಎರಡನೇ ಡೋಸ್ ಲಸಿಕೆ ಮೇ.08 ರಂದು ಮೂರನೇ ಡೋಸ್ ಲಸಿಕೆ ಮೇ.15 ರಂದು ಹಾಗೂ 4-6 ಡೋಸ್ ಲಸಿಕೆಯನ್ನು ಸೆ.15 ರಂದು ನೀಡಲಾಗಿದೆ ಎಂದು ತೋರಿಸುತ್ತಿದೆ.

ಈ ಸಂಬಂಧ ಮುಖ್ಯ ವೈದ್ಯಕೀಯ ಅಧಿಕಾರಿ ಅಖಿಲೇಶ್ ಮೋಹನ್ ಮಾತನಾಡಿದ್ದು, ಎರಡಕ್ಕಿಂತಲೂ ಹೆಚ್ಚು ಲಸಿಕೆ ಡೋಸ್ ಪಡೆದಿರುವ ಇದೇ ಮೊದಲ ಪ್ರಕರಣ ಇದಾಗಿದೆ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಇದು ಕಿಡಿಗೇಡಿತನ ಮತ್ತು ಪಿತೂರಿಯ ಪ್ರಕರಣದಂತೆ ಕಾಣುತ್ತದೆ ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. 

ಕೆಲವು ಕಿಡಿಗೇಡಿಗಳು ಪೋರ್ಟಲ್ ನ್ನು ಹ್ಯಾಕ್ ಮಾಡಿ ಈ ರೀತಿ ಮಾಡಿರಬಹುದು ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com