

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎನ್ ಡಿಎ ಸರ್ಕಾರ ಎಂದರೆ ನೋ ಡೇಟಾ ಅವೆಯ್ಲಬಲ್ (ಡೇಟಾ ಲಭ್ಯವಿಲ್ಲದ ಸರ್ಕಾರ) ಎಂದು ವ್ಯಂಗ್ಯವಾಡಿದ್ದಾರೆ.
ಈ ಸರ್ಕಾರ ಯಾವುದೇ ಉತ್ತರವನ್ನೂ ನೀಡುವುದಿಲ್ಲ ಹಾಗೂ ಹೊಣೆಗಾರಿಕೆ ಇಲ್ಲದ ಸರ್ಕಾರವಾಗಿದೆ. ನೋ ಡೇಟಾ ಅವೇಲಬಲ್ (ಎನ್ ಡಿಎ) ಸರ್ಕಾರಕ್ಕೆ ನೀವು ಅದನ್ನು ನಂಬುವುದಷ್ಟೇ ಬೇಕು. ಕೊರೋನಾ ಅವಧಿಯಲ್ಲಿ ಯಾರೂ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿಲ್ಲ. ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಲಾಕ್ ಡೌನ್ ಅವಧಿಯಲ್ಲಿ ನಡೆದು ತಮ್ಮ ಊರಿಗೆ ಬರುತ್ತಿದ್ದಾಗ ವಲಸಿಗ ಕಾರ್ಮಿಕರು ಯಾರೂ ಸಾವನ್ನಪ್ಪಿಲ್ಲ. ಈ ಸರ್ಕಾರದ ಅವಧಿಯಲ್ಲಿ ಯಾರ ಮೇಲೆಯೂ ಗುಂಪು ಹಲ್ಲೆ ನಡೆದಿಲ್ಲ. ಯಾವುದೇ ಪತ್ರಕರ್ತರನ್ನೂ ಬಂಧಿಸಿಲ್ಲ ಎಂದು ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಬರೆದಿದ್ದಾರೆ.
ಯಾವ ಅಂಕಿ-ಅಂಶಗಳೂ ಇಲ್ಲ. ಯಾವುದಕ್ಕೂ ಉತ್ತರವಿಲ್ಲ. ಯಾವುದಕ್ಕೂ ಹೊಣೆಗಾರಿಕೆ ಇಲ್ಲ ಎಂದು ಗಾಂಧಿ ಹೇಳಿದ್ದಾರೆ.
ತಮ್ಮ ಈ ಪೋಸ್ಟ್ ನೊಂದಿಗೆ "ಸಬ್ ಚಂಗಾ ಸಿ" ಎಂಬ ಗುಜರಾತಿ ಭಾಷೆಯ ಮೋದಿ ಹೇಳಿಕೆಯನ್ನು ವ್ಯಂಗ್ಯ ಮಾಡಲು "ಸಬ್ ಗಯಾ ಸಿ" ಜಿಐಎಫ್ ಫೈಲ್ ನ್ನೂ ರಾಹುಲ್ ಗಾಂಧಿ ಟ್ಯಾಗ್ ಮಾಡಿದ್ದಾರೆ.