ತಮಿಳುನಾಡು: ನಕಲಿ ಬ್ಯಾಂಕ್ ಆರಂಭಿಸಿ ವಂಚಿಸುತ್ತಿದ್ದ ವ್ಯಕ್ತಿ ಪೊಲೀಸರ ಬಲೆಗೆ!

ಇತ್ತೀಚೆಗೆ ದೇಶದಲ್ಲಿ ಬ್ಯಾಂಕ್ ಗಳಲ್ಲಿನ ಬಹುಕೋಟಿ ವಂಚನೆ ಪ್ರಕರಣಗಳು ಬಯಲಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಆದರೆ ಚೆನ್ನೈನ ಅಂಬತ್ತೂರಿನಲ್ಲಿ ನಡೆದಿರುವ ವಂಚನೆ ಪ್ರಕರಣ ನಿಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತದೆ!
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚೆನ್ನೈ: ಇತ್ತೀಚೆಗೆ ದೇಶದಲ್ಲಿ ಬ್ಯಾಂಕ್ ಗಳಲ್ಲಿನ ಬಹುಕೋಟಿ ವಂಚನೆ ಪ್ರಕರಣಗಳು ಬಯಲಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಆದರೆ ಚೆನ್ನೈನ ಅಂಬತ್ತೂರಿನಲ್ಲಿ ನಡೆದಿರುವ ವಂಚನೆ ಪ್ರಕರಣ ನಿಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತದೆ!

ಚೆನ್ನೈನ ಅಂಬತ್ತೂರಿನಲ್ಲಿ ವ್ಯಕ್ತಿಯೊಬ್ಬ ಸ್ವಂತ ಬ್ಯಾಂಕ್ ತೆರೆದು ಜನರ ಹಣವನ್ನು ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

ನಕಲಿ ಬ್ಯಾಂಕ್ ತೆರೆದ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದು, ವ್ಯಕ್ತಿಯಿಂದ  56.65 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ವ್ಯಕ್ತಿಯನ್ನು ಚಂದ್ರಬೋಸ್ (44) ಎಂದು ಗುರ್ತಿಸಲಾಗಿದೆ. ಚಂದ್ರಬೋಸ್ ಚೆನ್ನೈನ ಅಂಬತ್ತೂರಿನಲ್ಲಿ ಬ್ಯಾಂಕ್ ನಡೆಸುತ್ತಿದ್ದ. ವಿವಿಧ ಜಿಲ್ಲೆಗಳಲ್ಲಿ 9 ಶಾಖೆಗಳನ್ನೂ ಆರಂಭಿಸಿದ್ದ. ಈ ನಕಲಿ ಬ್ಯಾಂಕ್ ನಲ್ಲಿ 3,000 ಜನರು ಖಾತೆಗಳನ್ನು ತೆರೆದಿದ್ದರು. ಈ ಬೋಗಸ್ ಬ್ಯಾಂಕ್ ನಲ್ಲಿ ಬ್ಯಾಂಕ್ ಖಾತೆ ತೆರೆಯಲು ಗ್ರಾಹಕರಿಂದ ರೂ.700 ಶುಲ್ಕ ಪಡೆಯಲಾಗಿದ್ದು, ಗ್ರಾಹಕರಿಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನೂ ನೀಡಲಾಗಿದೆ.

ಬ್ಯಾಂಕ್ ಇತರೆ ಅಸಲಿ ಬ್ಯಾಂಕ್ ನಂತೆ ನಡೆದುಕೊಂಡಿದ್ದು, ನಿಶ್ಚಿತ ಠೇವಣಿಗೆ ಹೆಚ್ಚಿನ ಬಡ್ಡಿ ನೀಡುವ ಆಸೆ ತೋರಿಸಿ ಜನರಿಂದ ಠೇವಣಿ ಪಡೆದುಕೊಂಡಿದೆ.

ಪ್ರಕರಣ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಚೆನ್ನೈ ನಗರ ಪೊಲೀಸ್ ಆಯುಕ್ತ ಶಂಕರ್ ಜಿವಾಲ್ ಅವರು ಮಾತನಾಡಿ, ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಮಾಹಿತಿ ಮೇರೆಗೆ ನಾವು ತನಿಖೆಯನ್ನು ಪ್ರಾರಂಭಿಸಿದ್ದೆವು. ಆರ್‌ಬಿಐನ ಎಜಿಎಂ ಕೂಡ ದೂರು ದಾಖಲಿಸಿದ್ದಾರೆ. ಬ್ಯಾಂಕ್ ಆರ್‌ಬಿಐ ನಕಲಿ ಪ್ರಮಾಣಪತ್ರಗಳನ್ನು ಹೊಂದಿತ್ತು. ಠೇವಣಿ ಚೀಟಿಗಳು, ಹಣ ಹಿಂಪಡೆಯುವ ಚೀಟಿಗಳು ಮತ್ತು ನಗದು ಎಣಿಕೆ ಯಂತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬ್ಯಾಂಕ್ ವಂಚನೆ ತನಿಖಾ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ನಕಲಿ ಬ್ಯಾಂಕ್ ನಲ್ಲಿ ಅಸಲಿ ಬ್ಯಾಂಕ್ ವ್ಯವಹಾರದಲ್ಲಿ ನಡೆಯುವ ಎಲ್ಲಾ ವ್ಯವಸ್ಥೆಗಳೂ ಇದ್ದವು. ಜನರಿಗೆ ಸಾಲವನ್ನು ನೀಡಲಾಗಿದ್ದು, ಠೇವಣಿಯನ್ನೂ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಹಕರು ಖಾತೆಯನ್ನು ತೆರೆಯಲು ಬಯಸಿದಾಗ, ಅವರಿಂದ ಸದಸ್ಯತ್ವ ಶುಲ್ಕವಾಗಿ ರೂ. 700 ಪಡೆದುಕೊಳ್ಳಲಾಗಿದೆ. ನಂತರ ಗ್ರಾಹಕರಿಗೆ ರೂ. 500 ಬ್ಯಾಲೆನ್ಸ್‌ನೊಂದಿಗೆ ಕ್ರೆಡಿಟ್/ಡೆಬಿಟ್ ಕಾರ್ಡ್ ಅನ್ನು ನೀಡಲಾಗಿದೆ. ಕಾರ್ಡ್ ಸಂಖ್ಯೆಗಳನ್ನು ಖಾತೆ ಸಂಖ್ಯೆಗಳಾಗಿ ನೀಡಲಾಗಿದೆ ಎಂದು ನಕಲಿ ಬ್ಯಾಂಕ್‌ನ ಕಾರ್ಯವೈಖರಿಯನ್ನು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಕಾರ್ಡ್‌ಗಳ ಕುರಿತು ಮಾತನಾಡಿದ ಆಯುಕ್ತರು, ಈ ನಕಲಿ ಬ್ಯಾಂಕ್ 'ಸೊಸೈಟಿ'ಗಳನ್ನು ರಚಿಸಿದ್ದು, ಈ ಸೊಸೈಟಿಗಳ ಮೂಲಕ ಗ್ರಾಹಕರು ಐಸಿಐಸಿಐ ಬ್ಯಾಂಕ್‌ನಿಂದ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ನಂತರ ಸ್ಟಿಕ್ಕರ್ ಅನ್ನು ಕಾರ್ಡ್‌ಗಳ ಮೇಲೆ ಅಂಟಿಸಿ ಗ್ರಾಹಕರಿಗೆ ನೀಡಿದ್ದಾರೆ.

ಆರೋಪಿಗಳು ಮಧುರೈ, ವಿರುಧಾಚಲಂ, ಕಲ್ಲಕುರಿಚಿ, ನಾಮಕ್ಕಲ್, ಪೆರಂಬಲೂರ್, ಈರೋಡ್, ತಿರುವಣ್ಣಾಮಲೈ ಮತ್ತು ಸೇಲಂ ಸೇರಿದಂತೆ ತಮಿಳುನಾಡಿನ ಒಂಬತ್ತು ಸ್ಥಳಗಳಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆದಿದ್ದು, ಅಧಿಕಾರಿಗಳು ಈ ಶಾಖೆಗಳಲ್ಲೂ ಶೋಧ ಕಾರ್ಯ ಆರಂಭಿಸಿದ್ದಾರೆ.

ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ಮತ್ತಷ್ಟು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ. ಪ್ರಸ್ತುತ ನಕಲಿ ಬ್ಯಾಂಕ್ ನಲ್ಲಿದ್ದ ರೂ.56.6 ಲಕ್ಷವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶೀಘ್ರದಲ್ಲೇ ಮತ್ತಷ್ಟು ಹಣವನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com