
ಭಾರತೀಯ ಸೇನೆ (ಸಂಗ್ರಹ ಚಿತ್ರ)
ಭಾರತೀಯ ಸೇನೆ ಹಾಗೂ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಯ ಸಂಘರ್ಷದ ಮೂಲಕ ಭಾರತ-ಚೀನಾ ನಡುವಿನ ಗಡಿ ವಿವಾದ ಮತ್ತೆ ಸದ್ದು ಮಾಡಿದೆ.
ಎಲ್ಎಸಿಯಲ್ಲಿ ಉಭಯ ದೇಶಗಳ ಸಿಬ್ಬಂದಿಗಳ ನಡುವೆ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಘರ್ಷಣೆ ಉಂಟಾಗಿದ್ದು, 6 ಮಂದಿ ಭಾರತೀಯ ಯೋಧರಿಗೆ ಗಾಯಗಳಾಗಿವೆ ಎಂದು ಭಾರತೀಯ ಸೇನೆ ಸೋಮವಾರ ಬಹಿರಂಗಪಡಿಸಿತ್ತು.
ಡಿ.09 ರಂದು ಚೀನಾ ಸೇನಾ ಸಿಬ್ಬಂದಿಗಳು ಎಲ್ಎಸಿ ಬಳಿ ಮುಖಾಮುಖಿಯಾಗಿದ್ದು, ಭಾರತೀಯ ಪಡೆಗಳು ಈ ನಡೆಯನ್ನು ತೀವ್ರವಾಗಿ ಖಂಡಿಸಿತ್ತು.
ವರದಿಯ ಪ್ರಕಾರ, 300 ಮಂದಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಸಿಬ್ಬಂದಿಗಳು ಅಲ್ಲಿದ್ದು, ಬೃಹತ್ ಪ್ರಮಾಣದಲ್ಲಿ ಚೀನಾದ ಸಿಬ್ಬಂದಿಗಳಿಗೆ ಗಾಯಗಳಾಗಿವೆ.
ಇದನ್ನೂ ಓದಿ: ತವಾಂಗ್ ನಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆ: ಅರುಣಾಚಲ ಗಡಿಯಲ್ಲಿ ಪರಿಸ್ಥಿತಿ 'ಸ್ಥಿರವಾಗಿದೆ' ಎಂದ ಚೀನಾ
2020 ರಲ್ಲಿ ಸಂಭವಿಸಿದ್ದ ಗಲ್ವಾನ್ ಘರ್ಷಣೆಯ ನಂತರ ಚೀನಾ- ಭಾರತದ ನಡುವೆ ಈ ಹೊಸ ಘರ್ಷಣೆ ಉಂಟಾಗಿದೆ. ಚೀನಾ ಹಾಗೂ ಭಾರತ 1962 ರಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆಸಿದ್ದವು, ಅರುಣಾಚಲ ಪ್ರದೇಶದ ಮೇಲಿನ ಹಕ್ಕು ಸ್ಥಾಪನೆಯ ವಿಷಯವಾಗಿ ಈ ಯುದ್ಧ ನಡೆದಾಗಿನಿಂದಲೂ ಚೀನಾ ಅರುಣಾಚಲ ಪ್ರದೇಶವನ್ನು ತನ್ನದೆಂದು ಹಕ್ಕು ಪ್ರತಿಪಾದನೆ ಮಾಡುತ್ತಿದ್ದು, ಅದನ್ನು ಟಿಬೆಟ್ ನ ಭಾಗ ಎಂದು ಹೇಳುತ್ತಿದೆ.
ಭಾರತ ಹೇಳುವುದೇನು?
ಭಾರತ ಚೀನಾದ ವಿರುದ್ಧ ಗಡಿ ಪ್ರದೇಶದಲ್ಲಿ ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಿಸುತ್ತಿದೆ ಎಂದು ಆರೋಪಿಸಿದೆ. ಡಿಸೆಂಬರ್ 9 ರಂದು, ಚೀನಾದ ಗಡಿ ವಾಸ್ತವ ರೇಖೆಯಲ್ಲಿ ಚೀನಾದ ಸೇನಾಪಡೆ ಯೋಧರು ಯಾಂಗ್ಟ್ಸೆ, ತವಾಂಗ್ ಸೆಕ್ಟರ್‌ನಲ್ಲಿ ಆಕ್ರಮಣ ಮಾಡಿಕೊಂಡು ಒಳನುಸುಳಿದರು. ಅಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿತು. ಇದನ್ನು ನಮ್ಮ ಪಡೆಗಳು ದೃಢವಾದ ರೀತಿಯಲ್ಲಿ ನಿಭಾಯಿಸಿದರು ಎಂದು ಸದನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತ- ಅಮೇರಿಕಾ ಜಂಟಿ ಸಮರಾಭ್ಯಾಸದ ಬೆನ್ನಲ್ಲೇ ಗಡಿಯಲ್ಲಿ ಚೀನಾ ಹೊಸದಾಗಿ ಘರ್ಷಣೆಗೆ ಮುಂದಾಗಿದ್ದು, ಎರಡೂ ದೇಶಗಳ ಸೈನಿಕರಿಗೆ ಗಾಯಗಳಾಗಿವೆ ಎಂದು ರಾಜನಾಥ್ ಸಿಂಗ್ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಚೀನಾ ಹೇಳುವುದೇನು?
ಕಳೆದ ವಾರ ಅರುಣಾಚಲ ಗಡಿಯ ಯಾಂಗ್ಟ್ಸೆ ಪ್ರದೇಶದಲ್ಲಿ ಭಾರತ - ಚೀನಾ ಸೇನಿಕರ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾದ ನಂತರ ಭಾರತದೊಂದಿಗಿನ ತನ್ನ ಗಡಿಯಲ್ಲಿ ಪರಿಸ್ಥಿತಿ "ಸ್ಥಿರವಾಗಿದೆ" ಎಂದು ಚೀನಾ ಹೇಳಿದೆ. ಆದರೆ ಅಲ್ಲಿ ಘರ್ಷಣೆ ನಡೆದಿದೆಯೇ? ಅಥವಾ ಇಲ್ಲವೇ? ನಡೆದಿದ್ದರೆ ಚೀನಾದ ಸೈನಿಕರಿಗೆ ಗಾಯಗಳಾಗಿರುವುದು ನಿಜವೇ ಎಂಬುದರ ಬಗ್ಗೆ ಚೀನಾ ತುಟಿಬಿಚ್ಚಿಲ್ಲ.