ನ್ಯಾಷನಲ್ ಹೆರಾಲ್ಡ್ ಕೇಸ್: ಇಂದೂ ಕೂಡ ಇಡಿಯಿಂದ ರಾಹುಲ್ ಗಾಂಧಿ ವಿಚಾರಣೆ, ಎಲ್ಲೆಡೆ ಬಿಗಿ ಭದ್ರತೆ
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಒಂದೆಡೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುತ್ತಿದ್ದಂತೆಯೇ ಮತ್ತೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೊಡ್ಡ ಹೈಡ್ರಾಮಾ ಶುರುವಾಗಿತ್ತು.
Published: 14th June 2022 09:06 AM | Last Updated: 14th June 2022 01:19 PM | A+A A-

ದೆಹಲಿಯಲ್ಲಿ ಬಿಗಿ ಭದ್ರತೆ
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಒಂದೆಡೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುತ್ತಿದ್ದಂತೆಯೇ ಮತ್ತೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೊಡ್ಡ ಹೈಡ್ರಾಮಾ ಶುರುವಾಗಿತ್ತು.
ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್ಸಿಗರು ದೇಶದ ಹಲವಡೆ ಪ್ರತಿಭಟನೆ ನಡೆಸಿದ್ದರು.
ಇಡಿ ನೋಟಿಸ್ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 11.10ರ ಸುಮಾರಿಗೆ ಬಿಗಿ ಭದ್ರತೆಯೊಂದಿಗೆ ರಾಹುಲ್ ಗಾಂಧಿಯವರು ವಿಚಾರಣೆಗೆ ಹಾಜರಾದರು. ಬೆಳಿಗ್ಗೆಯಿಂದ ರಾತ್ರಿಯವರೆಗೆ ರಾಹುಲ್ ಗಾಂಧಿಯವರು ಇಡಿ ಪ್ರಶ್ನೆಗಳಿಗೆ ಉತ್ತರಿಸಿದರು. ಆದರೆ, ವಿಚಾರಣೆ ಇನ್ನೂ ಅಪೂರ್ಣವಾಗಿದ್ದು, ಇಂದು (ಮಂಗಳವಾರ) ಕೂಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: 'ಸುಳ್ಳು ಪಾಪಕ್ಕೆ ಸಮ': ಇಡಿ ಕಚೇರಿಗೆ ಮುಂದೆ ವಿಚಾರಣೆಗೆ ಹಾಜರಾಗುವ ಮುನ್ನ ರಾಹುಲ್ ಗಾಂಧಿ ಟ್ವೀಟ್
ಇಡಿ ವಿಚಾರಣೆಯ ಮೊದಲ ದಿನವೇ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಇಂದು ಯಾವುದೇ ರೀತಿಯ ಅಹಿತಕರ ವಾತಾವರಣ ಸೃಷ್ಟಿಯಾಗದಂತೆ ದೆಹಲಿ ಪೊಲೀಸರು ಎಲ್ಲೆಡೆ ಬಿಗಿ ಭದ್ರತೆ ನೀಡಿದ್ದಾರೆ.
ದೆಹಲಿಯ ಅಕ್ಬಾರ್ ರಸ್ತೆಯಲ್ಲಿ ಬ್ಯಾರಿಕೇಡ್ ಗಳ ಹಾಕಿ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ. ಅಲ್ಲದೆ, ಈ ಸ್ಥಳದಲ್ಲಿ ಸೆಕ್ಷನ್ 144 ಮುಂದುವರೆದಿದೆ ಎಂದು ತಿಳಿದುಬಂದಿದೆ.
ರಾಹುಲ್ ಬಂಧನ ಸಾಧ್ಯತೆ?
ಈ ನಡುವೆ ಇಡಿ ಇಂದೂ ಕೂಡ ರಾಹುಲ್ ಗಾಂಧಿಯವರನ್ನು ವಿಚಾರಣೆಗೊಳಪಡಿಸಿದ್ದು, ವಿಚಾರಣೆ ಪೂರ್ಣಗೊಂಡ ಬಳಿಕ ರಾಹುಲ್ ಗಾಂಧಿಯವರನ್ನು ಬಂಧನಕ್ಕೊಳಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.