ಅಗ್ನಿಪಥ್ ಪ್ರತಿಭಟನೆ: ಸಿಕಂದರಾಬಾದ್ ಘರ್ಷಣೆ ಸೂತ್ರಧಾರನ ಬಂಧನ!

ಕೇಂದ್ರ ಸರ್ಕಾರದ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ವಿರೋಧಿಸಿ ಸಿಕಂದರಾಬಾದ್ ನಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸೇನಾ ತರಬೇತಿ ಕೇಂದ್ರದ ಮಾಲೀಕನನ್ನು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಲ್ನಾಡು: ಕೇಂದ್ರ ಸರ್ಕಾರದ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ವಿರೋಧಿಸಿ ಸಿಕಂದರಾಬಾದ್ ನಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸೇನಾ ತರಬೇತಿ ಕೇಂದ್ರದ ಮಾಲೀಕನನ್ನು ಬಂಧಿಸಿದ್ದಾರೆ.

ಸಿಕಂದರಾಬಾದ್ ರೈಲು ನಿಲ್ದಾಣದ ಮೇಲಿನ ದಾಳಿಯ ಹಿಂದಿನ ಸಂಚಿನ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಆವುಲ ಸುಬ್ಬಾರಾವ್ ಎಂಬ ವ್ಯಕ್ತಿಯನ್ನು ಬಂದಿಸಿದ್ದು, ಈತನೇ ಸಿಕಂದರಾಬಾದ್ ಅಗ್ನಿಶಾಮಕ ಪ್ರತಿಭಟನೆಯ ಹಿಂದಿನ ಪ್ರಮುಖ ಸೂತ್ರಧಾರ ಎಂದು ಹೇಳಲಾಗಿದೆ. 

ವಿಧ್ವಂಸಕ ಕೃತ್ಯವನ್ನು ಯೋಜಿಸಿ ಅದಕ್ಕೆ ಯುವಕರನ್ನು ಪ್ರೇರೇಪಿಸಿದ ಆರೋಪದ ಮೇರೆಗೆ ಈತನನ್ನು ಪೊಲೀಸರು ಬಂದಿಸಿದ್ದಾರೆ ಎನ್ನಲಾಗಿದೆ. ನರಸರಾವ್ ಪೇಟೆಯ ನಿವಾಸಿ ಸುಬ್ಬರಾವ್ ಪಲ್ನಾಡು ಪ್ರದೇಶದಲ್ಲಿ ಸೇನಾ ತರಬೇತಿ ಕೇಂದ್ರ ನಡೆಸುತ್ತಿದ್ದ. ಈತನೇ ಅಭ್ಯರ್ಥಿಗಳಿಗೆ ಪ್ರಚೋದನೆ ನೀಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಸುಬ್ಬರಾವ್ ನರಸರಾವ್ ಪೇಟೆಯ ಸಾಯಿ ಡಿಫೆನ್ಸ್ ಅಕಾಡೆಮಿಯ ನಿರ್ದೇಶಕನಾಗಿದ್ದು, ಹಿಂಸಾಚಾರದ ಬಳಿಕ ತಮ್ಮ ಸ್ವಂತ ಊರಾದ ಕಮ್ಮಂ ನಲ್ಲಿ ತಲೆಮರೆಸಿಕೊಂಡಿದ್ದ. ಈತನ ಇರುವಿಕೆಯನ್ನು ಪತ್ತೆ ಮಾಡಿದ ಪೊಲೀಸರು ಅಲ್ಲಿಗೇ ತೆರಳಿ ಈತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 

ಬಂಧನ ಬಳಿಕ ಸುಬ್ಬರಾವ್ ನನ್ನು ತಕ್ಷಣ ನರಸರಾವ್ ಪೇಟೆ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಯಿತು. ಈತನ ಅಧೀನದಲ್ಲಿಯೇ ಪ್ರತಿಭಟನಾಕಾರರು ಪ್ರತಿಭಟನೆ ಮಾಡಿ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಖಾಸಗಿ ತರಬೇತಿ ಕೇಂದ್ರಗಳ ನೆರವಿನಿಂದ ವಿದ್ಯಾರ್ಥಿಗಳು ವಿಧ್ವಂಸಕ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಆರೋಪಿಸುತ್ತಿದ್ದು, ಇದಕ್ಕಾಗಿಯೇ ಕೆಲವು ಪ್ರತಿಭಟನಾಕಾರರಿಗೆ ಅಕಾಡೆಮಿಯಲ್ಲಿ ತರಬೇತಿ ನೀಡಲಾಗಿದೆ. ಅಲ್ಲದೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ನೀರಿನ ಬಾಟಲಿಗಳು, ಮಜ್ಜಿಗೆ, ಪುಳಿಯೋಗರೆ ಪ್ಯಾಕೆಟ್‌ಗಳನ್ನು ಖಾಸಗಿ ಸೇನಾ ಕೋಚಿಂಗ್ ಅಕಾಡೆಮಿಗಳು ಪೂರೈಸುತ್ತಿವೆ. 10 ಖಾಸಗಿ ರಕ್ಷಣಾ ಅಕಾಡೆಮಿಗಳ ಪ್ರತಿಭಟನಾಕಾರರು ಭಾಗಿಯಾಗಿದ್ದಾರೆ ಎಂದು  ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com