ಹಿರಿಯರೆಂಬ ಕಾರಣಕ್ಕೆ ಸಂಭಾಜಿ ಭಿಡೆ ಕಾಲಿಗೆರಗಿದ ಸುಧಾ ಮೂರ್ತಿ; ಬಲವಂತವಾಗಿ ಭೇಟಿ ಮಾಡಿದ್ದ ಭಿಡೆ ಬೆಂಬಲಿಗರು!

ಭೀಮಾ ಕೊರೆಗಾಂವ್ ಪ್ರಕರಣದ ಪ್ರಮುಖ ಆರೋಪಿ ಸಂಭಾಜಿ ಭಿಡೆ ಅವರನ್ನು ಇನ್ಫೋಸಿಸ್ ಫೌಂಡೇಶನ್ ನ ಸುಧಾಮೂರ್ತಿ ಅವರು ಭೇಟಿಯಾಗಿರುವ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಆದರೆ ಭಿಡೆ ಬೆಂಬಲಿಗರೇ ಬಲವಂತವಾಗಿ ಸುಧಾಮೂರ್ತಿ ಅವರನ್ನು ಭೇಟಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಸುಧಾಮೂರ್ತಿ-ಸಂಭಾಜಿ ಭಿಡೆ
ಸುಧಾಮೂರ್ತಿ-ಸಂಭಾಜಿ ಭಿಡೆ

ಮುಂಬೈ: ಭೀಮಾ ಕೊರೆಗಾಂವ್ ಪ್ರಕರಣದ ಪ್ರಮುಖ ಆರೋಪಿ ಸಂಭಾಜಿ ಭಿಡೆ ಅವರನ್ನು ಇನ್ಫೋಸಿಸ್ ಫೌಂಡೇಶನ್ ನ ಸುಧಾಮೂರ್ತಿ ಅವರು ಭೇಟಿಯಾಗಿರುವ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಆದರೆ ಭಿಡೆ ಬೆಂಬಲಿಗರೇ ಬಲವಂತವಾಗಿ ಸುಧಾಮೂರ್ತಿ ಅವರನ್ನು ಭೇಟಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಹೌದು.. ಸುಧಾಮೂರ್ತಿ ಅವರು ಮಹಾರಾಷ್ಟ್ರದ ಬಲಪಂಥೀಯ ಸಂಘಟನೆಯ ನಾಯಕ ಹಾಗೂ ಭೀಮಾ ಕೊರೆಗಾಂವ್ ಪ್ರಕರಣದ ಪ್ರಮುಖ ಆರೋಪಿ ಸಂಭಾಜಿ ಭಿಡೆ ಅವರಿಗೆ ನಮಸ್ಕರಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋಗೆ ವ್ಯಾಪರ ಪ್ರತಿಕ್ರಿಯೆಗಳು ಬರುತ್ತಿವೆ. ಅದರೆ ಇದೀಗ ಈ ಇಡೀ ಬೆಳವಣಿಗೆಯ ಹಿನ್ನಲೆ ಬೆಳಕಿಗೆ ಬಂದಿದ್ದು, ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ  ಸುಧಾಮೂರ್ತಿ ಸೋಮವಾರ ತಮ್ಮ ಪುಸ್ತಕಗಳ ಪ್ರಚಾರ ಕಾರ್ಯಕ್ರಮದಲ್ಲಿ ಓದುಗರೊಂದಿಗೆ ಸಂವಾದ ನಡೆಸುತ್ತಿದ್ದರು. ಈ ಕಾರ್ಯಕ್ರಮವನ್ನು ಮೆಹ್ತಾ ಪಬ್ಲಿಷಿಂಗ್ ಹೌಸ್‌ನ ಸಂಪಾದಕೀಯ ಮುಖ್ಯಸ್ಥ ಯೋಜನಾ ಯಾದವ್ ಆಯೋಜಿಸಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಸಂಭಾಜಿ ಭಿಡೆ ಬೆಂಬಲಿಗರು ಛತ್ರಪತಿ ಶಿವಾಜಿ ಮಹಾರಾಜರ ಹಿಂದಿನ ರಾಜಧಾನಿ ರಾಯಗಡ ಕೋಟೆಯಲ್ಲಿ ಚಿನ್ನದ ಸಿಂಹಾಸನವನ್ನು ಸ್ಥಾಪಿಸಲು ಆರ್ಥಿಕ ಸಹಾಯಕ್ಕಾಗಿ ಸುಧಾಮೂರ್ತಿ ಅವರನ್ನು ಭೇಟಿಯಾಗಲು ಮುಂದಾದರು. ಪೊಲೀಸರು ಭಿಡೆ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿದ್ದರೂ ಅವರನ್ನು ಭೇಟಿಯಾಗಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಕಾರ್ಯಕ್ರಮದ ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸರು ಅವರನ್ನು ಎಷ್ಟೇ ತಡೆಯಲು ಪ್ರಯತ್ನಿಸಿದರೂ ಪಟ್ಟು ಬಿಡದ ಭಿಡೆ ಬೆಂಬಲಿಗರು, ಅವರನ್ನು ಭೇಟಿ ಮಾಡಿ ಮಾತನಾಡಿಸಿ ಹೊರಟು ಹೋಗುತ್ತೇವೆ ಎಂದು ಪುಸಲಾಯಿಸಿ ಒಳಗೆ ಹೋಗಿದ್ದಾರೆ. ಬಳಿಕ ಭಿಡೆ ಅವರನ್ನು ಸುಧಾಮೂರ್ತಿ ಅವರಿಗೆ ಪರಿಚಯಿಸಿದ್ದಾರೆ. ತಾವು ಶಿವಪ್ರತಿಷ್ಠಾನ ಸಂಘಟನೆಯ ಕಾರ್ಯಕರ್ತರಾಗಿದ್ದು, ರಾಯಗಡ ಕೋಟೆಯಲ್ಲಿ ಶಿವಾದಿ ಚಿನ್ನದ ಸಿಂಹಾಸನವನ್ನು ಸ್ಥಾಪಿಸಲು ಆರ್ಥಿಕ ನೆರವು ಬೇಕು ಎಂದು ಮನವಿ ಮಾಡಿದ್ದಾರೆ. ಆ ಬಳಿಕವೇ ಸುಧಾಮೂರ್ತಿ ಅವರು ಭಿಡೆ ಅವರನ್ನು ಭೇಟಿಯಾಗಲು ಒಪ್ಪಿದ್ದಾರೆ. ಬಳಿಕ ಹಿರಿಯರೆಂದು ಅವರ ಕಾಲಿಗೆ ನಮಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಒತ್ತಾಯಕ್ಕೆ ಮಣಿದು ಭಿಡೆ ಭೇಟಿಯಾದ ಸುಧಾಮೂರ್ತಿ
ಈ ಕುರಿತು ಮಾಹಿತಿ ನೀಡಿರುವ ಮೆಹ್ತಾ ಪಬ್ಲಿಷಿಂಗ್ ಹೌಸ್‌ನ ಸಂಪಾದಕೀಯ ಮುಖ್ಯಸ್ಥ ಯೋಜನಾ ಯಾದವ್ ಅವರು, 'ಸುಧಾಮೂರ್ತಿ ಅವರು ಯಾರನ್ನೂ ಭೇಟಿಯಾಗಲು ಒಪ್ಪಿರಲಿಲ್ಲ. ಆದರೆ ಭಿಡೆ ಅವರ ಬೆಂಬಲಿಗರು ಯಾವುದೇ ಆಹ್ವಾನವಿಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಭಾಂಗಣದ ಹೊರಗೆ ಭಿಡೆ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ, ಸ್ಥಳೀಯ ಪೊಲೀಸರು ಒತ್ತಡಕ್ಕೆ ಒಳಗಾದರು ಮತ್ತು ನಂತರ ಓದುಗರೊಂದಿಗಿನ ಸಂವಾದ ನಡೆಸುತ್ತಿದ್ದ ಸುಧಾಮೂರ್ತಿ ಅವರನ್ನು ಭೇಟಿಯಾಗಲು ಭಿಡೆ ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಒತ್ತಡ ಎಷ್ಟಿತ್ತೆಂದರೆ ಸಿಟ್ಟಿಗೆದ್ದ ಸುಧಾಮೂರ್ತಿ ಅವರು ಸಂವಾದವನ್ನು ನಿಲ್ಲಿಸಿ ಭಿಡೆಯನ್ನು ಭೇಟಿಯಾಗಲು ಹೊರಟರು. ಭಿಡೆ ಯಾರೆಂದು ಅವರಿಗೆ ತಿಳಿದಿರಲಿಲ್ಲ, ಆದ್ದರಿಂದ ಅವರು ಭಿಡೆ ಅವರ ವಯಸ್ಸು ಕೇಳಿ ಹಿರಿಯರೆಂದು ಗೌರವದಿಂದ ಅವರಿಗೆ ನಮಸ್ಕರಿಸಿದರು ಎಂದು ಹೇಳಿದರು. 

"ಭಿಡೆ ತನ್ನೊಂದಿಗೆ ಒಂದೂವರೆ ಗಂಟೆಗಳ ಕಾಲ ಮಾತನಾಡಲು ಬಯಸಿದ್ದರು ಎಂದು ಸುಧಾಮೂರ್ತಿ ಅವರು ನಂತರ ನಮಗೆ ಹೇಳಿದರು. ಆದರೆ ಅವರು ಅವರಿಗೆ ಒಂದೂವರೆ ನಿಮಿಷಕ್ಕಿಂತ ಹೆಚ್ಚು ಸಮಯವಿಲ್ಲ ಎಂದು ನಮ್ರವಾಗಿ ಹೇಳಿದರು. ಭಿಡೆ ಅವರೊಂದಿಗಿನ ಭೇಟಿಯ ದೃಶ್ಯವನ್ನು ಪ್ರಚಾರಕ್ಕೆ ಬಳಸಬಹುದು ಎಂದು ಅವರು ಸುಧಾಮೂರ್ತಿಗೆ ಎಚ್ಚರಿಕೆ ನೀಡಿದ್ದರು ಎಂದು ಯಾದವ್ ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ
ಇನ್ನು ಸುಧಾಮೂರ್ತಿ ಅವರನ್ನು ಸಂಭಾಜಿ ಭಿಡೆ ಭೇಟಿಯಾದ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಪತ್ರಕರ್ತ ನಿಖಿಲ್ ವಾಗ್ಲೆ, "ಇಂತಹ ಕುಖ್ಯಾತ ವ್ಯಕ್ತಿಯ ಪಾದಗಳನ್ನು ಮುಟ್ಟಿ ಏನು ಸಾಧಿಸಿದರು? ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಪ್ರೀತಿ ಶರ್ಮಾ ಮೆನನ್ ಟ್ವೀಟ್ ಮಾಡಿದ್ದು, "ಅವರು ಬಿಂದಿ ಧರಿಸಿದ್ದರು ಎಂದು ನಂಬಿರಿ. ಸುಧಾಮೂರ್ತಿಯಂತಹವರು ಭಿಡೆಯಂತಹ ಧರ್ಮಾಂಧರನ್ನು ಭೇಟಿಯಾದಾಗ, ಅವರು ತಮ್ಮ ನಿಜವಾದ ಬಣ್ಣವನ್ನು ಬಹಿರಂಗಪಡಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಂದಿ ಇಲ್ಲ ಎಂದ ಪತ್ರಕರ್ತೆಯೊಂದಿಗೆ ಮಾತು ನಿರಾಕರಿಸಿದ್ದ ಭಿಡೆ
ಕಳೆದ ವಾರ, ನವೆಂಬರ್ 2ರಂದು, ಇದೇ ಭಿಡೆ, ಮಹಿಳಾ ದೂರದರ್ಶನ ಸುದ್ದಿ ವರದಿಗಾರ್ತಿಯೊಬ್ಬರು ಹಣೆಗೆ ಬಿಂದಿ ಇಟ್ಟಿಲ್ಲ ಎಂಬ ಕಾರಣಕ್ಕೆ ಅವರೊಂದಿಗೆ ಮಾತನಾಡಲು ನಿರಾಕರಿಸಿದ್ದರು. ಭಿಡೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಹೊರ ಬರುವಾಗ ನಡೆದ ಈ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಶಿಂಧೆ ಅವರೊಂದಿಗಿನ ಭೇಟಿಯ ಬಗ್ಗೆ ಪ್ರಶ್ನೆ ಕೇಳಿದ ವರದಿಗಾರ್ತಿಗೆ, ಮೊದಲು ಬಿಂದಿ ಇಡುವುದನ್ನು ಕಲಿಯಿರಿ, ಇಲ್ಲದಿದ್ದರೆ ತಾನು ಮಾತನಾಡುವುದಿಲ್ಲ. ಮಹಿಳೆ ಭಾರತ ಮಾತೆಯನ್ನು ಹೋಲುತ್ತಾಳೆ ಮತ್ತು ಅವಳು ಬಿಂದಿ ಇಟ್ಟುಕೊಳ್ಳದೆ ವಿಧವೆಯ ಹಾಗೆ ಕಾಣಿಸಿಕೊಳ್ಳಬಾರದು ಎಂದು ಭಿಡೆ ಹೇಳಿದ್ದು ಬಹು ಚರ್ಚಿತ ವಿಷಯವಾಗಿತ್ತು. ಈ ವಿಷಯವಾಗಿ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ಭಿಡೆಗೆ ನೋಟಿಸ್ ನೀಡಿತ್ತು. 

ಯಾರು ಈ ಭಿಡೆ
ಸಂಭಾಜಿ ರಾವಿ ಭಿಡೆಯವರದು ಬಹಳ ವಿವಾದಿತ ವ್ಯಕ್ತಿತ್ವ. 2018ರಲ್ಲಿ ಸಂಭವಿಸಿದ ಭೀಮಾ ಕೋರೆಗಾಂವ್ ಘರ್ಷಣೆಯಲ್ಲಿ, ಕಲ್ಲು ತೂರಾಟದ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲ್ಪಟ್ಟ ವ್ಯಕ್ತಿಗಳಲ್ಲಿ ಭಿಡೆ ಕೂಡಾ ಒಬ್ಬರಾಗಿದ್ದಾರೆ.

ಭಿಡೆಯ ಇತರೆ ವಿವಾದಗಳು 
2018ರಲ್ಲಿ, ಭಿಡೆ ಅವರು ತಮ್ಮ ತೋಟದಿಂದ ಮಾವಿನ ಹಣ್ಣುಗಳನ್ನು ತಿಂದ ನಂತರ ದಂಪತಿಗೆ ಗಂಡುಮಕ್ಕಳ ಆಶೀರ್ವಾದವಾಗಿದೆ ಎಂಬ ಹೇಳಿಕೆ ನೀಡಿ ಟೀಕೆಗಳನ್ನು ಎದುರಿಸಿದ್ದರು. 2008ರಲ್ಲಿ, ಅವರು ಅಶುತೋಷ್ ಗೋವಾರಿಕರ್ ಅವರ ಐತಿಹಾಸಿಕ ಚಲನಚಿತ್ರ ಜೋಧಾ ಅಕ್ಬರ್ ವಿರುದ್ಧದ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದರು. ಈ ಸಂಬಂಧ ಚಿತ್ರಮಂದಿರಗಳಿಗೆ ನುಗ್ಗಿ ಚಲನಚಿತ್ರದ ಪ್ರದರ್ಶನವನ್ನು ನಿಲ್ಲಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಒಂದು ವರ್ಷದ ನಂತರ, ಅವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಶಿವಾಜಿ ಮಹಾರಾಜರಿಂದ ಆದಿಲ್ ಷಾ ಅವರ ಸೇನಾ ಕಮಾಂಡರ್ ಅಫ್ಜಲ್ ಖಾನ್ ಅವರ ಹತ್ಯೆಯನ್ನು ಚಿತ್ರಿಸಿದ ಕಲಾವಿದನ ಅನಿಸಿಕೆಗಳ ಚಿತ್ರಣದ ಬಗ್ಗೆ ಗದ್ದಲ ಎಬ್ಬಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com