ತೆಲಂಗಾಣ: ನಕ್ಸಲ್ ನಾಯಕಿ ಉಷಾ ರಾಣಿ ಪೊಲೀಸರಿಗೆ ಶರಣು

ನಕ್ಸಲ್ ನಾಯಕಿ ಆಲೂರಿ ಉಷಾ ರಾಣಿ ಅಲಿಯಾಸ್ ವಿಜಯಕ್ಕ ಅಲಿಯಾಸ್ ಪೋಚಕ್ಕ ಅಲಿಯಾಸ್ ಭಾನು ದೀದಿ ಶನಿವಾರ ರಾಜ್ಯ ಪೊಲೀಸರ ಮುಂದೆ ಶರಣಾಗಿದ್ದಾರೆ.
ನಕ್ಸಲ್ ನಾಯಕಿ ಉಷಾ ರಾಣಿ
ನಕ್ಸಲ್ ನಾಯಕಿ ಉಷಾ ರಾಣಿ

ತೆಲಂಗಾಣ: ನಕ್ಸಲ್ ನಾಯಕಿ ಆಲೂರಿ ಉಷಾ ರಾಣಿ ಅಲಿಯಾಸ್ ವಿಜಯಕ್ಕ ಅಲಿಯಾಸ್ ಪೋಚಕ್ಕ ಅಲಿಯಾಸ್ ಭಾನು ದೀದಿ ಶನಿವಾರ ರಾಜ್ಯ ಪೊಲೀಸರ ಮುಂದೆ ಶರಣಾಗಿದ್ದಾರೆ. ಗುಂಟೂರು ಜಿಲ್ಲೆಯ ತೆನಾಲಿ ಮೂಲದ ರಾಣಿ (53) ಅವರು ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಉತ್ತರ ಉಪ ವಲಯ ಬ್ಯೂರೋದ ವಿಭಾಗೀಯ ಸಮಿತಿ ಸದಸ್ಯರಾಗಿದ್ದರು ಎಂದು ತೆಲಂಗಾಣ ಪೊಲೀಸ್ ಮಹಾನಿರ್ದೇಶಕರು  ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಡೇರದ ಆಕಾಂಕ್ಷೆಗಳು ಮತ್ತು ಆರೋಗ್ಯದ ಸಮಸ್ಯೆಗಳನ್ನು ಉಲ್ಲೇಖಿಸಿ ರಾಣಿ ಶರಣಾಗಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಲು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ನಕ್ಸಲ್ ಸಂಘಟನೆಗೆ ಸೇರಿ ಮೂರು ದಶಕಗಳಿಗೂ ಹೆಚ್ಚು ಕಾಲ ಸಶಸ್ತ್ರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಆದಾಗ್ಯೂ, "ಆಕೆಯ ಆಕಾಂಕ್ಷೆಗಳು ಈಡೇರದ ಕಾರಣ ಮತ್ತು ಸುದೀರ್ಘ ಸಶಸ್ತ್ರ ಹೋರಾಟದ ಮೂಲಕ ತನ್ನ ಕನಸುಗಳನ್ನು ನನಸಾಗಿಸುವ ಭರವಸೆ ಇಲ್ಲದ ಕಾರಣ, ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಶರಣಾಗಲು ನಿರ್ಧರಿಸಿದ್ದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

 ಸಿಪಿಐ-ಮಾವೋವಾದಿ ಸಂಘಟನೆಯಲ್ಲಿ ಮುಂದುವರಿಯಲು ಆರೋಗ್ಯ ಬೆಂಬಲ ನೀಡುತ್ತಿಲ್ಲವಾದ್ದರಿಂದ, ಏಪ್ರಿಲ್ 2019 ರಲ್ಲಿ ಚಿಕಿತ್ಸೆ ನೀಡುವಂತೆ ಹಾಗೂ ಶರಣಾಗುವುದಾಗಿ ಪ್ರಸ್ತಾಪಿಸಿದ್ದರು. ತದನಂತರ ಎರಡೂವರೆ ವರ್ಷಗಳ ನಂತರ ಅಂದರೆ ಆಗಸ್ಟ್ 2022 ರಲ್ಲಿ ಆಕೆಯ ಶರಣಾಗತಿಗೆ ಒಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ. 

ಉಷಾ ರಾಣಿ ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ಹಲವಾರು ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿದ್ದಾಳೆ. ಭದ್ರತಾ ಪಡೆಗಳ ಮೇಲೆ ಐದು ದಾಳಿಗಳು, ಪೊಲೀಸರೊಂದಿಗೆ ಮೂರು ಗುಂಡಿನ ಚಕಮಕಿಗಳು, ಸಾರ್ವಜನಿಕ ಮತ್ತು ಖಾಸಗಿ ಕಟ್ಟಡಗಳನ್ನು ಸ್ಫೋಟಿಸುವ ಮೂರು ಪ್ರಕರಣಗಳು, ಅಪಹರಣ, ಎರಡು ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು 14 ಅಪರಾಧಗಳಲ್ಲಿ ಭಾಗವಹಿಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com