ಗುಜರಾತ್‌ನಲ್ಲಿ ಪಕ್ಷದ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದ ಎಎಪಿ; ನಿರಾಕರಿಸಿದ ಪೊಲೀಸರು

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಹಮದಾಬಾದ್‌ನ ನವರಂಗ್‌ಪುರ ಪ್ರದೇಶಕ್ಕೆ ಬಂದಿಳಿದ ತಕ್ಷಣ ಸ್ಥಳೀಯ ಪೊಲೀಸರು ಪಕ್ಷದ ಕಚೇರಿ ಮೇಲೆ ದಾಳಿ ನಡೆಸಿದ್ದರು, ಆದರೆ ಏನೂ ಪತ್ತೆಯಾಗಲಿಲ್ಲ ಎಂದು ಎಎಪಿ ನಾಯಕ ಇಸುದನ್ ಗಧ್ವಿ ಹೇಳಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಅಹಮದಾಬಾದ್: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಹಮದಾಬಾದ್‌ನ ನವರಂಗ್‌ಪುರ ಪ್ರದೇಶಕ್ಕೆ ಬಂದಿಳಿದ ತಕ್ಷಣ ಸ್ಥಳೀಯ ಪೊಲೀಸರು ಪಕ್ಷದ ಕಚೇರಿ ಮೇಲೆ ದಾಳಿ ನಡೆಸಿದ್ದರು, ಆದರೆ ಏನೂ ಪತ್ತೆಯಾಗಲಿಲ್ಲ ಎಂದು ಎಎಪಿ ನಾಯಕ ಇಸುದನ್ ಗಧ್ವಿ ಹೇಳಿದ್ದಾರೆ.

ಆದಾಗ್ಯೂ, ಪೊಲೀಸ್ ಅಧಿಕಾರಿಯೊಬ್ಬರು ಈ ಹೇಳಿಕೆಯನ್ನು ನಿರಾಕರಿಸಿದ್ದು, ಎಎಪಿ ಪದಾಧಿಕಾರಿಗಳನ್ನು ಸಂಪರ್ಕಿಸಿದಾಗ, ಯಾರು ದಾಳಿ ನಡೆಸಿದರು ಮತ್ತು ನಿಖರವಾಗಿ ಏನಾಯಿತು ಎಂಬುದರ ಕುರಿತು ಯಾವುದೇ ವಿವರಗಳನ್ನು ನೀಡಿಲ್ಲ.

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಭಾನುವಾರ ಸಂಜೆ ಅಹಮದಾಬಾದ್‌ಗೆ ಬಂದಿದ್ದರು. ಸೋಮವಾರ ಮತ್ತು ಮಂಗಳವಾರ ಅವರು ಆಟೋರಿಕ್ಷಾ ಚಾಲಕರು, ಉದ್ಯಮಿಗಳು, ವಕೀಲರು ಮತ್ತು ನೈರ್ಮಲ್ಯ ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ.

ಎಎಪಿಯ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಗಧ್ವಿ ಅವರು ಭಾನುವಾರ ತಡರಾತ್ರಿ ಟ್ವೀಟ್‌ ಮಾಡಿದ್ದು, 'ಅರವಿಂದ್ ಕೇಜ್ರಿವಾಲ್ ಅವರು ಇಲ್ಲಿಗೆ ಬಂದಿಳಿದ ತಕ್ಷಣ ಸ್ಥಳೀಯ ಪೊಲೀಸರು ಅಹಮದಾಬಾದ್‌ನಲ್ಲಿರುವ ಎಎಪಿ ಕಚೇರಿ ಮೇಲೆ ದಾಳಿ ನಡೆಸಿದರು. ಅವರು ಎರಡು ಗಂಟೆಗಳ ಕಾಲ ಕಚೇರಿಯಲ್ಲಿ ಶೋಧಕಾರ್ಯ ನಡೆಸಿದರು. ಆದರೆ, ಏನೂ ಸಿಗದ ಕಾರಣ ಅವರು ನಿರ್ಗಮಿಸಿದರು' ಎಂದು ಆರೋಪಿಸಿದ್ದರು.

ಗಧ್ವಿ ಅವರ ಟ್ವೀಟ್‌ ಅನ್ನು ಟ್ಯಾಗ್ ಮಾಡಿರುವ ಕೇಜ್ರಿವಾಲ್, 'ಗುಜರಾತ್ ಜನರಿಂದ ಎಎಪಿಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲದಿಂದ ಆಡಳಿತಾರೂಢ ಬಿಜೆಪಿ ತನ್ನ ಪ್ರಜ್ಞೆಯನ್ನು ಕಳೆದುಕೊಂಡಿದೆ. ದೆಹಲಿ ನಂತರ ಅವರು ಗುಜರಾತ್‌ನಲ್ಲೂ ದಾಳಿ ಆರಂಭಿಸಿದ್ದಾರೆ. ಆದರೆ, ದೆಹಲಿಯಂತೆಯೇ, ಅವರು ಗುಜರಾತ್‌ನಲ್ಲಿ ಏನನ್ನೂ ಕಂಡುಕೊಂಡಿಲ್ಲ' ಎಂದಿದ್ದಾರೆ.

ಆದರೆ, ನವರಂಗ್‌ಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪಿ.ಕೆ. ಪಟೇಲ್ ಅವರು ಯಾವುದೇ ರೀತಿಯ ದಾಳಿ ನಡೆಸಿಲ್ಲ ಎಂದು ಹೇಳಿದ್ದಾರೆ.

'ದಾಳಿಯ ಕುರಿತು ಗಾಧ್ವಿ ಮಾಡಿದ್ದ ಟ್ವೀಟ್ ಬಗ್ಗೆ ತಿಳಿದ ನಂತರ, ನಾನು ಭಾನುವಾರ ರಾತ್ರಿ ಎಎಪಿ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ವಿವರಗಳನ್ನು ಕೇಳಿದೆ. ಆದರೆ, ಅಲ್ಲಿದ್ದ ಪಕ್ಷದ ಮುಖಂಡರು ಯಾರು ಬಂದರು ಮತ್ತು ನಿಖರವಾಗಿ ಏನಾಯಿತು ಎಂಬ ಬಗ್ಗೆ ಯಾವುದೇ ವಿವರಗಳನ್ನು ನೀಡಲಿಲ್ಲ' ಎಂದು ಪಟೇಲ್ ಸೋಮವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com