
ನವದೆಹಲಿ: ಲಡಾಖ್‌ನಲ್ಲಿರುವ ಭಾರತದ ಭೂಪ್ರದೇಶದ ಮೇಲೆ ಚೀನಾ ಆಕ್ರಮಣ ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಬುಧವಾರ ಪುನರುಚ್ಚರಿಸಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಹುಲ್ ಗಾಂಧಿಯವರು, ಪ್ರಧಾನಿ ಮೋದಿ ಅವರು, ಒಂದು ಇಂಚು ಭೂಮಿಯನ್ನು ಆಕ್ರಮಿಸಿಲ್ಲ ಎಂದು ಹೇಳುತ್ತಾರೆ. ಅದು ಸಂಪೂರ್ಣ ಸುಳ್ಳು. ಲಡಾಖ್'ಗೆ ನಾನು ಭೇಟಿ ನೀಡಿದ್ದೇನೆ. ಚೀನಾ ಭಾರತೀಯ ಭೂಮಿಯ ಮೇಲೆ ಒಳನುಗ್ಗಿರುವುದು ಸತ್ಯ ಎಂದು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇದೇ ವೇಳೆ ಚೀನಾ ತನ್ನ ಹೊಸ ನಕ್ಷೆಯಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ಸೇರಿಸಿರುವ ಕುರಿತು ಪ್ರಶ್ನೆಗೆ ಉತ್ತರಿಸಿ, ನಕ್ಷೆಯ ಪ್ರಶ್ನೆ ಬಹಳ ಗಂಭೀರವಾದದ್ದು, ಆದರೆ, ಅವರು (ಚೀನಾ) ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಧಾನಿ ಕೂಡ ಈ ವಿಷಯದ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದರು.
ಚೀನಾ ಸೋಮವಾರ ತನ್ನ "ಸ್ಟ್ಯಾಂಡರ್ಡ್ ಮ್ಯಾಪ್" ನ 2023 ಆವೃತ್ತಿ ಬಿಡುಗಡೆ ಮಾಡಿದೆ. ಈ ನಕ್ಷೆಯು ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ತನ್ನ ಪ್ರದೇಶದ ಭಾಗವಾಗಿ ತೋರಿಸುತ್ತಿದೆ.
ಈ ತಿಂಗಳ ಆರಂಭದಲ್ಲಿ, ಲಡಾಖ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಚೀನಾದ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪಡೆಗಳು ಭಾರತದ ಒಂದಿಂಚು ಭೂಮಿಯನ್ನು ವಶಪಡಿಸಿಕೊಂಡಿಲ್ಲ ಎಂಬ ಮಾತು ಸತ್ಯಕ್ಕೆ ದೂರವಾಗಿದೆ ಎಂದು ಅವರು ಟೀಕಾಪ್ರಹಾರ ನಡೆಸಿದ್ದರು.
ಭಾರತೀಯ ಭೂಪ್ರದೇಶವನ್ನು ಚೀನಾ ಸೈನಿಕರು ಅತಿಕ್ರಮಿಸಿ ವಶಪಡಿಸಿಕೊಂಡಿದ್ದಾರೆ. ಇದು ಕಳವಳಕಾರಿ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದರು. "ಚೀನಾ ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳುವುದರ ಬಗ್ಗೆ ಇಲ್ಲಿನ ಸ್ಥಳೀಯರು ಚಿಂತಿತರಾಗಿದ್ದಾರೆ. ಚೀನಾದ ಸೈನಿಕರು ಅವರ ಭೂಮಿಯನ್ನು ಕಿತ್ತುಕೊಂಡಿದ್ದಾರೆ. ಆದರೆ, ಪ್ರಧಾನಿ ಒಂದು ಇಂಚು ಭೂಮಿಯನ್ನು ಕಿತ್ತುಕೊಂಡಿಲ್ಲ ಎಂದು ಹೇಳುತ್ತಾರೆ. ಇದು ನಿಜವಲ್ಲ, ನೀವು ಈ ಕುರಿತು ಯಾರನ್ನಾದರೂ ಕೂಡಾ ಕೇಳಬಹುದು ಎಂದು ಹೇಳಿದ್ದರು.
Advertisement