

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಇದು ಸೌಜನ್ಯದ ಭೇಟಿ ಎಂದಿರುವ ಮಹಾ ಸಿಎಂ ಶಿಂಧೆ ಅವರು, ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡ ಯೋಜನೆಗಳ ಪ್ರಗತಿ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಪರಿಣಾಮದ ಬಗ್ಗೆ ಪ್ರಧಾನಿಗೆ ವಿವರಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಅವರು ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಗೊಂಡ ನಂತರ ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ ಎಂಬ ವರದಿಗಳ ಬೆನ್ನಲ್ಲೇ ಶಿಂಧೆ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಶಿಂಧೆ ಅವರು ತಮ್ಮ ತಂದೆ ಸಂಭಾಜಿ, ಪತ್ನಿ ಲತಾ, ಪುತ್ರ ಶ್ರೀಕಾಂತ್, ಸೊಸೆ ವೃಶಾಲಿ ಮತ್ತು ಮೊಮ್ಮಗ ರುದ್ರಾಂಶ್ ಅವರೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು.
"ಇದು ಸೌಜನ್ಯದ ಭೇಟಿಯಾಗಿದೆ. ನನ್ನ ತಂದೆ ಪ್ರಧಾನಿಯನ್ನು ಭೇಟಿಯಾಗಲು ಉತ್ಸುಕರಾಗಿದ್ದರು. ಅವರ ಆಸೆ ಈಡೇರಿರುವುದು ನನಗೆ ಖುಷಿ ತಂದಿದೆ" ಎಂದು ಪ್ರಧಾನಿ ಮೋದಿ ಭೇಟಿ ಬಳಿಕ ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.
ಭೇಟಿ ವೇಳೆ ಮಹಾ ಮುಖ್ಯಮಂತ್ರಿಗಳು, ರಾಯಗಢ ಜಿಲ್ಲೆಯ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿರುವ ಬುಡಕಟ್ಟು ಗ್ರಾಮವಾದ ಇರ್ಶಲವಾಡಿಯಲ್ಲಿ ಭೂಕುಸಿತದ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು.
ಈ ಭೂಕುಸಿತದಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ ಮತ್ತು 80 ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.