ಗುಣಮಟ್ಟ ಪರೀಕ್ಷೆಯಲ್ಲಿ Bisleri ಮತ್ತೆ ವಿಫಲ: Goa ಬೆನ್ನಲ್ಲೇ ಪಶ್ಚಿಮ ಬಂಗಾಳದ ಘಟಕದ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ, ಕಾನೂನು ಕ್ರಮಕ್ಕೆ FSSAI ಸಮ್ಮತಿ..!

ನವದೆಹಲಿ: ಜನಪ್ರಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್ ಬಿಸ್ಲೇರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಕಂಪನಿಯ ಪಶ್ಚಿಮ ಬಂಗಾಳದ ಘಟಕದಿಂದ ಸಂಗ್ರಹಿಸಿದ ಕುಡಿಯುವ ನೀರಿನ ಮಾದರಿಯು ಆಹಾರ ಸುರಕ್ಷತಾ ಪರೀಕ್ಷೆಯಲ್ಲಿ ವಿಫಲವಾಗಿದೆ.
ನೀರಿನ ಮಾದರಿಯಲ್ಲಿ ಕೊಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಬಿಸ್ಲೇರಿ ಇಂಟರ್ನ್ಯಾಷನಲ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಜಲ್ಪೈಗುರಿಯ ತೆಲಿಪಾರಾ ಗ್ರಾಮದ ಬಿಸ್ಲೇರಿ ಘಟಕದಿಂದ ಸಂಗ್ರಹಿಸಲಾದ ನೀರಿನ ಮಾದರಿಯಲ್ಲಿ ಕೊಲಿಫಾರ್ಮ್ ಬ್ಯಾಕ್ಟೀರಿಯಾ ಇರುವುದು ಪ್ರಾಥಮಿಕ ಹಾಗೂ ಉಲ್ಲೇಖಿತ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಬ್ಯಾಕ್ಟೀರಿಯಾಗಳು ಒಳಚರಂಡಿ ಸೋರಿಕೆ ಅಥವಾ ಹಾನಿಗೊಳಗಾದ ಕೊಳವೆಗಳ ಮೂಲಕ ನೀರಿನ ವ್ಯವಸ್ಥೆಯನ್ನು ಪ್ರವೇಶಿಸಿರುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ 2026ರ ಆಗಸ್ಟ್ 12ರಂದು ನಿರ್ದಿಷ್ಟ ಬ್ಯಾಚ್ನ ನೀರಿನ ಮಾರಾಟಕ್ಕೆ ಮಾತ್ರ FSSAI ನಿಷೇಧ ಹೇರಿದೆ. PB 201 ಬ್ಯಾಚ್ ಸಂಖ್ಯೆಯ ಉತ್ಪನ್ನದ ಮಾರಾಟವನ್ನು ತಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ಯಾಕೇಜ್ಡ್ ಕುಡಿಯುವ ನೀರಿನ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಬಿಸ್ಲೇರಿ ವಿರುದ್ಧ FSSAI ಕೈಗೊಂಡಿರುವ ಎರಡನೇ ಕಾನೂನು ಕ್ರಮ ಇದಾಗಿದೆ.
ಇದಕ್ಕೂ ಮೊದಲು ಗೋವಾದಲ್ಲಿರುವ ಬಿಸ್ಲೇರಿಯ ಘಟಕದಿಂದ ಸಂಗ್ರಹಿಸಿದ ನೀರಿನ ಮಾದರಿಯೂ ಪರೀಕ್ಷೆಯಲ್ಲಿ ವಿಫಲವಾಗಿತ್ತು. ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಾಧಿಕಾರ ಅನುಮತಿ ನೀಡಿತ್ತು.
ಗೋವಾ ಘಟಕದ ಪ್ರಕರಣದಲ್ಲಿ ನೀರಿನ ಮಾದರಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಬ್ರೋಮೇಟ್ ಅಂಶ ಪತ್ತೆಯಾಗಿತ್ತು. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಆ ಮಾದರಿಯನ್ನು ಸುರಕ್ಷಿತವಲ್ಲ ಎಂದು ಘೋಷಿಸಲಾಗಿತ್ತು.
ಬಿಸ್ಲೇರಿ ಮೇಲ್ಮನವಿ ಸಲ್ಲಿಸಿದ ಬಳಿಕ ಮಾದರಿಯನ್ನು ಮತ್ತೊಂದು ಉಲ್ಲೇಖಿತ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಯೂ ಪಾಲಿನ್ಯೂಕ್ಲಿಯರ್ ಅರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು (PAHs) ಪತ್ತೆಯಾಗಿದ್ದು, ನೀರನ್ನು ಸುರಕ್ಷಿತವಲ್ಲ ಎಂದು ವರ್ಗೀಕರಿಸಲಾಗಿತ್ತು.
ಈ ಪ್ರಯೋಗಾಲಯಗಳ ವರದಿಗಳ ಆಧಾರದ ಮೇಲೆ ಆಹಾರ ಸುರಕ್ಷತಾ ಕಾಯ್ದೆ-2006ರ ಅಡಿಯಲ್ಲಿ ಕಂಪನಿಯ ವಿರುದ್ಧ ಕಾನೂನು ಕ್ರಮ ಆರಂಭಿಸಲು FSSAI ಮುಂದಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಸ್ಲೇರಿ ಇಂಟರ್ನ್ಯಾಷನಲ್, ತನ್ನ ಉತ್ಪನ್ನಗಳು ಕುಡಿಯಲು ಸುರಕ್ಷಿತವಾಗಿವೆ ಎಂದು ಹೇಳಿದೆ. ಅಲ್ಲದೆ, FSSAI ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಪ್ರಾಧಿಕಾರದೊಂದಿಗೆ ಸಹಕರಿಸುವುದಾಗಿ ಸೋಮವಾರ ತಿಳಿಸಿದೆ.
ಇದೇ ವೇಳೆ, ದೇಶಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ ಎಂದು FSSAI ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಜಿತ್ ಪುನ್ಹಾನಿ ತಿಳಿಸಿದ್ದಾರೆ.
ಪ್ರಯೋಗಾಲಯಗಳಲ್ಲಿನ ಗುಣಮಟ್ಟ ಪರೀಕ್ಷೆಗಳನ್ನು ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
ಈ ಕ್ರಮಗಳ ಉದ್ದೇಶ ಗ್ರಾಹಕರಲ್ಲಿ ಆತಂಕ ಸೃಷ್ಟಿಸುವುದಲ್ಲ, ಬದಲಾಗಿ ಆಹಾರ ಸುರಕ್ಷತಾ ನಿಯಮಗಳ ಪಾಲನೆಯನ್ನು ಖಚಿತಪಡಿಸುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಹಲವು ಆಹಾರ ಮತ್ತು ಪಾನೀಯ ಉತ್ಪನ್ನಗಳ ವಿರುದ್ಧ ಪರಿಶೀಲನಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಆಹಾರ ಉತ್ಪನ್ನಗಳ ಪ್ಯಾಕೇಜಿಂಗ್ ಸಾಮಗ್ರಿಗಳನ್ನೂ ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಇದಲ್ಲದೆ, ಪ್ಯಾಕೇಜ್ಡ್ ಕುಡಿಯುವ ನೀರು ಮತ್ತು ಖನಿಜಯುಕ್ತ ನೀರಿನ ಮೇಲಿನ ನಿಗಾ ಹೆಚ್ಚಿಸಲು FSSAI ಕ್ರಮ ಕೈಗೊಂಡಿದೆ. ಈ ಸಂಬಂಧ ರಾಜ್ಯಗಳ ಆಹಾರ ಸುರಕ್ಷತಾ ಆಯುಕ್ತರು ಮತ್ತು ಪ್ರಾದೇಶಿಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದ್ದು, ತಪಾಸಣೆ, ಮಾದರಿ ಸಂಗ್ರಹ ಮತ್ತು ಮೇಲ್ವಿಚಾರಣೆಯನ್ನು ತೀವ್ರಗೊಳಿಸುವಂತೆ ತಿಳಿಸಲಾಗಿದೆ.
ಈ ವರ್ಷ ಆಹಾರ ಉತ್ಪನ್ನಗಳ ತಯಾರಕರು, ಆಹಾರ ಉದ್ಯಮಗಳು ಮತ್ತು ಇ-ಕಾಮರ್ಸ್ ಕಂಪನಿಗಳ ವಿರುದ್ಧವೂ FSSAI ತನ್ನ ಜಾರಿ ಕ್ರಮಗಳನ್ನು ಹೆಚ್ಚಿಸಿದೆ. ಎನರ್ಜಿ ಡ್ರಿಂಕ್ಸ್ ಹಾಗೂ ಮದ್ಯ ತಯಾರಿಕಾ ಕಂಪನಿಗಳ ವಿರುದ್ಧವೂ ಪ್ರಾಧಿಕಾರ ಕ್ರಮ ಕೈಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



