

ಗುವಾಹಟಿ: ಜೂನ್ 18 ರಂದು ಜಿಲ್ಲೆಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ರ‍್ಯಾಲಿಗೆ ಹಾಜರಾಗದ ಕಾರಣ ದಂಪತಿಗೆ ಥಳಿಸಿದ ಆರೋಪದ ಮೇಲೆ ಬಿಜೆಪಿ ಯುವ ಮುಖಂಡನನ್ನು ಅಸ್ಸಾಂನ ಶಿವಸಾಗರ್‌ನಲ್ಲಿ ಬಂಧಿಸಲಾಗಿದೆ.
ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಮಾತನಾಡಿ, 'ಬಿಜೆಪಿ ಯುವ ಮುಖಂಡ ಅಂಗಶುಮನ್ ಬೋರಾ ಎಂದು ಗುರುತಿಸಲಾಗಿದ್ದು, ಸೋಮವಾರ ರಾತ್ರಿ ಶಿವಸಾಗರದ ಗೌರಿಸಾಗರ ಪ್ರದೇಶದಲ್ಲಿ ಬಂಧಿಸಲಾಗಿದೆ' ಎಂದರು.
ನಡ್ಡಾ ಅವರು ಅಮ್ಗುರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಚಾರಿಂಗ್‌ನಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಆದರೆ, ನಿರೀಕ್ಷೆಗೂ ಮೀರಿ ಕಡಿಮೆ ಸಂಖ್ಯೆಯ ಸಾರ್ವಜನಿಕರು ಆಗಮಿಸಿದ್ದು, ಸ್ಥಳೀಯ ಬಿಜೆಪಿ ಮುಖಂಡರನ್ನು ಕೆರಳಿಸಿದೆ.
ಪಕ್ಷದ ಗೌರಿಸಾಗರ ಮಂಡಲ ಘಟಕದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿರುವ ಬೋರಾ ಅವರು ಸ್ಥಳೀಯ ತೋಮಸ್ ಸಂಗ್ಮಾ ಅವರ ಮನೆಗೆ ತೆರಳಿದ್ದರು. ತೋಮಸ್ ಇಲ್ಲದ ಸಂದರ್ಭದಲ್ಲಿ ಆರೋಪಿ ಸಂಗ್ಮಾ ಅವರ ಪತ್ನಿ ಪೂರ್ಣಿಮಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೂರ್ಣಿಮಾ ಸಂಗ್ಮಾ ಸುದ್ದಿಗಾರರೊಂದಿಗೆ ಮಾತನಾಡಿ, 'ನಾನು ಇಲ್ಲಿನ ಹೋಟೆಲ್‌ನಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತೇನೆ. ನನ್ನ ಕೆಲಸದ ಕಾರಣ ನನಗೆ ರ‍್ಯಾಲಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ, ಅಂಗಶುಮನ್ ಬೋರಾ ಅದನ್ನು ಕೇಳಲು ಸಿದ್ಧರಿರಲಿಲ್ಲ. ಅವರು ನಮ್ಮ ಮನೆಗೆ ಬಂದು ನನ್ನ ಮೇಲೆ ಹಲ್ಲೆ ನಡೆಸಿದರು' ಎಂದರು.
ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ತೋಮಸ್ ಸಂಗ್ಮಾ ಮಾತನಾಡಿ, 'ನಾನು ಮಾರುಕಟ್ಟೆಯಿಂದ ನನ್ನ ಮನೆಗೆ ಹಿಂದಿರುಗುತ್ತಿದ್ದಾಗ ಬೋರಾ ನನ್ನನ್ನು ಕೂಡ ಥಳಿಸಿದರು. ನಾವಿಬ್ಬರೂ ದಿನಗೂಲಿ ನೌಕರರಾಗಿರುವುದರಿಂದ ನಮ್ಮ ಕೆಲಸವನ್ನು ಕಳೆದುಕೊಳ್ಳಲು ನಮಗೆ ಸಾಧ್ಯವಿಲ್ಲ ಎಂದು ನಾನು ವಿವರಿಸಲು ಪ್ರಯತ್ನಿಸಿದೆ. ಆದರೆ, ಅವರು ನನ್ನನ್ನು ಹೊಡೆಯುವುದನ್ನು ಮುಂದುವರೆಸಿದನು' ಎಂದು ದೂರಿದ್ದಾರೆ.
ಗೌರಿಸಾಗರ ಪೊಲೀಸ್ ಠಾಣೆಯಲ್ಲಿ ದಂಪತಿ ನೀಡಿದ ದೂರಿನ ಮೇರೆಗೆ ಬಿಜೆಪಿ ಯುವ ಮುಖಂಡನನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.