

ಚೆನ್ನೈ: ಕುದಿಯುವ ರಸಮ್ ಪಾತ್ರೆಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಭೀಕರ ಘಟನೆ ಸೋಮವಾರ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆಕಸ್ಮಿಕವಾಗಿ ಬಿಸಿ ರಸಮ್ ಕಡಾಯಿಗೆ ಬಿದ್ದ 21 ವರ್ಷದ ಯುವಕ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಂತ್ರಸ್ತ ಯುವಕ ಕಾಲೇಜು ವಿದ್ಯಾರ್ಥಿಯಾಗಿದ್ದು, ಅಡುಗೆ ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಕಳೆದ ವಾರ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದೆ ಎಂದು ಸ್ಥಳೀಯ ಸಿಬ್ಬಂದಿ ಹೇಳಿದ್ದಾರೆ.
ಅತಿಥಿಗಳಿಗೆ ಬಡಿಸಲು ಸಿದ್ದಪಡಿಸಲಾಗುತ್ತಿದ್ದ ಕುದಿಯುತ್ತಿದ್ದ ರಸಮ್ ಕಡಾಯಿಗೆ ವ್ಯಕ್ತಿ ಬಿದ್ದಿದ್ದಾನೆ.
ತೀವ್ರ ಸುಟ್ಟಗಾಯಗಳಾಗಿರುವ ಸಂತ್ರಸ್ತನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 30 ರಂದು ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.