ಇಸ್ರೇಲ್-ಹಮಾಸ್ ಯುದ್ಧ: ವಿಶ್ವಸಂಸ್ಥೆ ಮತದಾನಕ್ಕೆ ಭಾರತ ಗೈರು; ವಿಪಕ್ಷಗಳ ಟೀಕೆ; ಭಾರತ ಭಯೋತ್ಪಾದನೆ ಪರ ನಿಲ್ಲುವುದಿಲ್ಲ ಎಂದ ಬಿಜೆಪಿ

ಇಸ್ರೇಲ್-ಹಮಾಸ್ ಯುದ್ಧಕ್ಕೆ ತಕ್ಷಣವೇ ವಿರಾಮ ಘೋಷಿಸಬೇಕೆಂದು ಕರೆ ನೀಡುವ ಸಂಬಂಧ ವಿಶ್ವಸಂಸ್ಥೆಯಲ್ಲಿ ಜೋರ್ಡಾನ್ ಮಂಡಿಸಿದ್ದ ನಿರ್ಣಯದ ಕುರಿತ ಮತದಾನದಿಂದ ಭಾರತ ದೂರ ಉಳಿದಿದ್ದು, ಈ ನಿರ್ಧಾರದ ವಿರುದ್ಧ ವಿಪಕ್ಷಗಳು ಟೀಕಾ ಪ್ರಕಾರ ನಡೆಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧಕ್ಕೆ ತಕ್ಷಣವೇ ವಿರಾಮ ಘೋಷಿಸಬೇಕೆಂದು ಕರೆ ನೀಡುವ ಸಂಬಂಧ ವಿಶ್ವಸಂಸ್ಥೆಯಲ್ಲಿ ಜೋರ್ಡಾನ್ ಮಂಡಿಸಿದ್ದ ನಿರ್ಣಯದ ಕುರಿತ ಮತದಾನದಿಂದ ಭಾರತ ದೂರ ಉಳಿದಿದ್ದು, ಈ ನಿರ್ಧಾರದ ವಿರುದ್ಧ ವಿಪಕ್ಷಗಳು ಟೀಕಾ ಪ್ರಕಾರ ನಡೆಸಿವೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿದ್ದ ನಿರ್ಣಯವನ್ನು 120 ದೇಶಗಳ ಸಹಮತಿಯ ಮೂಲಕ ಅಂಗೀಕರಿಸಲಾಯಿತು. ಆದರೆ, 14 ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿದರೆ, ಭಾರತ ಸೇರಿದಂತೆ 45 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು.

ಮತದಾನ ಕುರಿತು ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತನಿಧಿ ಯೋಜನಾ ಪಟೇಲ್ ಅವರು, ಭಯೋತ್ಪಾದನೆ ಎಂಬುದು ಮಾರಣಾಂತಿಕವಾಗಿದ್ದು, ಅದಕ್ಕೆ ಯಾವುದೇ ಎಲ್ಲೆ ಇರುವುದಿಲ್ಲ. ನಾವು ಮಾನವೀಯ ನೆರವು ಕೊಡಬಹುದೆಂಬುದನ್ನು ಒಪ್ಪಬಹುದಾದರೂ ನಾವು ಭಯೋತ್ಪಾದನೆಯಲ್ಲಿ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ ಎಂಬ ಅಂಶವನ್ನು ನಿರ್ಣಯದಲ್ಲಿ ಸೇರಿಸಿದ ಕಾರಣ ಮತದಾನದಿಂದ ದೂರವುಳಿಯುತ್ತಿದ್ದೇವೆಂದು ಹೇಳಿದರು.

ಕೇಂದ್ರ ಸರ್ಕಾರದ ಈ ನಿಲುವನ್ನು ವಿಪಕ್ಷ ನಾಯಕರಾದ ಪ್ರಿಯಾಂಕಾ ವಾದ್ರಾ, ಶರದ್ ಪವಾರ್, ಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮತ್ತು ಎಡಪಕ್ಷಗಳು ಟೀಕಿಸಿವೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು, 'ಕಣ್ಣಿಗೆ ಕಣ್ಣು ಎಂದು ಕೀಳುತ್ತಾ ಹೋದರೆ, ಇಡೀ ಜಗತ್ತೇ ಕುರುಡಾಗುತ್ತದೆ' ಎಂಬ ಮಹಾತ್ಮ ಗಾಂಧಿ ಹೇಳಿಕೆ ಉಲ್ಲೇಖಿಸಿದ್ದಾರೆ.

ದೇಶವು ಅಹಿಂಸೆ ಮತ್ತು ಸತ್ಯದ ತತ್ವಗಳ ಮೇಲೆ ಸ್ಥಾಪಿತವಾಗಿದೆ. ರಾಷ್ಟ್ರೀಯತೆಯನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಪಾದಿಸಿದ್ದರು. ಮಾನವೀಯತೆಯು ಕಾನೂನಿಗಿಂತ ಮಿಗಿಲಾದುದು. ಯದ್ಧದಿಂದ ಲಕ್ಷಾಂತರ ಜನರಿಗೆ ಆಹಾರ, ನೀರು, ವೈದ್ಯಕೀಯ ನೆರವು, ಸಂವಹನ ಮತ್ತು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಕ್ಷಣವೇ ಅವರ ನೆರವಿಗೆ ಬರಬೇಕಾದದು ಮಾನವೀಯ ಧರ್ಮ' ಎಂದು ಹೇಳಿದ್ದಾರೆ.

ಸಿಪಿಐ(ಎಂ) ಮತ್ತು ಸಿಪಿಐ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಹಮಾಸ್​ ಸಂಘಟನೆಯ ವಿರುದ್ಧ ಗಾಜಾದ ಮೇಲೆ ಇಸ್ರೇಲ್​ ಸೇನೆ ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸಲು ಮತ್ತು ಸಂತ್ರಸ್ತರಿಗೆ ನೆರವಾಗುವ ಕುರಿತು ವಿಶ್ವಸಂಸ್ಥೆ ಕೈಗೊಂಡ ನಿರ್ಣಯದಿಂದ ಭಾರತ ಹಿಂದೇಟು ಹಾಕಿದ್ದು, ಆಘಾತಕಾರಿ. ಮಾನವೀಯ ಜವಾಬ್ದಾರಿಯನ್ನು ದೇಶ ಎತ್ತಿ ಹಿಡಿಯಬೇಕಿತ್ತು ಎಂದು ಹೇಳಿದೆ.

ಅಮೆರಿಕ ಮತ್ತು ಇಸ್ರೇಲ್‌ನ​ ಮಿತ್ರರಾಷ್ಟ್ರವಾಗಿರುವ ಭಾರತ, ವಿದೇಶಾಂಗ ನೀತಿಗಾಗಿ ಕದನ ವಿರಾಮ ಘೋಷಿಸುವ ಕುರಿತ ನಿರ್ಣಯದಿಂದ ದೂರವಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ನಿರ್ಣಯವನ್ನು ಅಂಗೀಕರಿಸಿದ ಬಳಿಕ, ಇಸ್ರೇಲ್ ಗಾಜಾ ಪಟ್ಟಿಯಲ್ಲಿ ವಾಯು ಮತ್ತು ಭೂ ದಾಳಿ ಹೆಚ್ಚಿಸಿದೆ ಎಂದು ಆರೋಪಿಸಿವೆ.

2.2 ಮಿಲಿಯನ್ ಪ್ಯಾಲೆಸ್ಟೀನಿಯನ್ನರ ನೆಲೆಯಾಗಿರುವ ಗಾಜಾದಲ್ಲಿ ಯುದ್ಧದಿಂದಾಗಿ ಎಲ್ಲಾ ಸಂವಹನಗಳು ಕಡಿತಗೊಂಡಿವೆ. ವಿಶ್ವಸಂಸ್ಥೆಯ ನಿರ್ಣಯವನ್ನು ಗೌರವಿಸಿ ತಕ್ಷಣದ ಕದನ ವಿರಾಮ ನೀಡಬೇಕು. ಈ ಯುದ್ಧ ನಿಲ್ಲಿಸಲು ಎರಡು ದೇಶ ಪರಿಹಾರವಾಗಿದೆ ಎಂದು ಹೇಳಿದೆ.

ಈ ನಡುವೆ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿರುವ ಬಿಜೆಪಿ, ಭಾರತ ಎಂದಿಗೂ ಭಯೋತ್ಪಾದನೆಯ ಪರವಾಗಿ ನಿಲ್ಲುವುದಿಲ್ಲ ಎಂಬುದನ್ನು ನಾಚಿಕೆ ಮತ್ತು ಆಘಾತಕ್ಕೊಳಗಾದವರು ಅರಿತುಕೊಳ್ಳಬೇಕು ಎಂದು ಹೇಳಿದೆ.

ಪಕ್ಷದ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಟ್ವೀಟ್ ಮಾಡಿ, ಇಸ್ರೇಲ್-ಪ್ಯಾಲೆಸ್ಟೈನ್ ವಿಷಯದ ಬಗ್ಗೆ ನಮ್ಮ ನಿಲುವು ದೃಢವಾಗಿದೆ. ಭಯೋತ್ಪಾದನೆಯ ಪರವಾಗಿ ನಿಲ್ಲುವವರು ಮಾತ್ರ ಇದನ್ನು ನಾಚಿಕೆಗೇಡು ಎಂದು ಭಾವಿಸುತ್ತಾರೆ. ಭಯೋತ್ಪಾದನೆಯನ್ನು ನಾವು ವಿರೋಧಿಸಲೇಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com