

ಕೊಚ್ಚಿ: ಗಾಜಾ ಮೇಲಿನ ಇಸ್ರೇಲ್ ದಾಳಿ (Israel-Gaza Conflict) ಖಂಡಿಸಿ ಕೇರಳದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಹಮಾಸ್ ನಾಯಕ ಪಾಲ್ಗೊಂಡರೆ ತಪ್ಪೇನು? ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ (Solidarity Youth Movement)ನ ರಾಜ್ಯಾಧ್ಯಕ್ಷ ಸುಹೈಬ್.ಸಿ.ಟಿ. ಪ್ರಶ್ನಿಸಿದ್ದಾರೆ.
ಕೇರಳ (Kerala)ದ ಮಲಪ್ಪುರಂನಲ್ಲಿ ಶುಕ್ರವಾರ ಪ್ಯಾಲೆಸ್ಟೈನ್ ಪರವಾಗಿ ಜಮಾತೆ ಇಸ್ಲಾಮಿಯ ಯುವ ಘಟಕವಾದ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಮಾಸ್ (Hamas) ನಾಯಕ ಖಲೀದ್ ಮಶಾಲ್ (Khaled Mashal) ವರ್ಚುವಲ್ ಮೂಲಕ ಪಾಲ್ಗೊಂಡಿದ್ದ ಬಗ್ಗೆ ಕೇರಳದಲ್ಲಿ ವ್ಯಾಪಕ ಚರ್ಚೆಯಾಗುತ್ತಿರುವಂತೆಯೇ ಈ ಬಗ್ಗೆ ಸಮರ್ಥಿಸಿಕೊಂಡಿರುವ ಸಾಲಿಡಾರಿಟಿ ಯೂತ್ ಮೂವ್ಮೆಂಟ್ನ ರಾಜ್ಯಾಧ್ಯಕ್ಷ ಸುಹೈಬ್.ಸಿ.ಟಿ, "ಪ್ಯಾಲೆಸ್ಟೈನ್ (Palestinians) ಜನರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಲು ಮತ್ತು ಇಸ್ರೇಲ್ (Israel) ದಾಳಿಯನ್ನು ಖಂಡಿಸಲು ಆಯೋಜಿಸಲಾದ ನಮ್ಮ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಇದರಲ್ಲಿ ಅಸಾಮಾನ್ಯವಾದುದನ್ನು ನೋಡುವ ಅಗತ್ಯವಿಲ್ಲ" ಎಂದು ತಿಳಿಸಿದ್ದಾರೆ.
''ಹಮಾಸ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಅಥವಾ ನಿಷೇಧಿತ ಸಂಘಟನೆಯಲ್ಲ. ಆ ನಾಯಕನ ಭಾಗವಹಿಸುವಿಕೆ ಕಾನೂನಿನಡಿಯಲ್ಲಿ ಅಪರಾಧವಲ್ಲ. ಭಾರತದಲ್ಲಿ ಇನ್ನೂ ಅನೇಕ ಒಗ್ಗಟ್ಟಿನ ಕಾರ್ಯಕ್ರಮಗಳು ನಡೆಯಲಿದ್ದು, ಇದು ಪ್ಯಾಲೆಸ್ಟೀನಿಯನ್ ಜನರಿಗೆ ಭಾರತೀಯರ ಬೆಂಬಲ ಸಾಬೀತುಪಡಿಸುತ್ತದೆ'' ಎಂದು ಸುಹೈಬ್ ಹೇಳಿದ್ದಾರೆ.
ಅ.7ರಂದು ಇಸ್ರೇಲ್ ಮೇಲೆ ಹಮಾಸ್ ಹಠಾತ್ ದಾಳಿಯಿಂದಾಗಿ ಸಂಘರ್ಷ ಏರ್ಪಟ್ಟಿದೆ. ಶನಿವಾರ ಇಸ್ರೇಲ್-ಹಮಾಸ್ ಯುದ್ಧ (Israel-Gaza Conflict)ಕ್ಕೆ ತಕ್ಷಣವೇ ಕದನ ವಿರಾಮ ಹಾಕಬೇಕು ಹಾಗೂ ಮಾನವೀಯ ಒಪ್ಪಂದಕ್ಕೆ ಮುಂದಾಗಬೇಕು ಎಂಬ ವಿಶ್ವಸಂಸ್ಥೆ (United Nations)ಯ ನಿರ್ಣಯ ಮತದಾನದಿಂದ ಭಾರತ ದೂರ ಉಳಿದಿದೆ. ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ನೆರವು ಎತ್ತಿಹಿಡಿಯುವುದು ಎಂಬ ಶೀರ್ಷಿಕೆಯ ವಿಶ್ವಸಂಸ್ಥೆ ನಿರ್ಣಯವನ್ನು ತೆಗೆದುಕೊಂಡಿತ್ತು.
ಈ ವೇಳೆ ನಡೆದ ಮತದಾನದಲ್ಲಿ ಭಾರತ ಸೇರಿದಂತೆ 45 ರಾಷ್ಟ್ರಗಳು ತಟಸ್ಥ ನಿಲುವು ತಳೆದರೆ, 120 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿವೆ. ಅಮೆರಿಕ, ಇಸ್ರೇಲ್ ಸೇರಿದಂತೆ ಇತರ 14 ದೇಶಗಳು ನಿರ್ಣಯದ ವಿರುದ್ಧ ಮತ ಹಾಕಿವೆ.