ಸನಾತನ ಧರ್ಮದ ಕುರಿತು ಟೀಕೆ: ಚೆನ್ನೈನಲ್ಲಿನ ಸಚಿವ ಉದಯನಿಧಿ ಸ್ಟಾಲಿನ್ ನಿವಾಸಕ್ಕೆ ಭದ್ರತೆ ಹೆಚ್ಚಳ

‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಜೀವ ಬೆದರಿಕೆ ಬಂದ ಒಂದು ದಿನದ ನಂತರ, ಚೆನ್ನೈನಲ್ಲಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ನಿವಾಸದ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ.
ಉದಯನಿಧಿ ಸ್ಟಾಲಿನ್
ಉದಯನಿಧಿ ಸ್ಟಾಲಿನ್

ಚೆನ್ನೈ: ‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಜೀವ ಬೆದರಿಕೆ ಬಂದ ಒಂದು ದಿನದ ನಂತರ, ಚೆನ್ನೈನಲ್ಲಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ನಿವಾಸದ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ.

ಉದಯನಿಧಿ ಸ್ಟಾಲಿನ್ ಹೇಳಿಕೆ ಹಿಂದೂ ಧರ್ಮಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಅವರ ತಲೆ ಕಡಿದು ತಂದು ಕೊಟ್ಟವರಿಗೆ 10 ಕೋಟಿ ರೂ. ಕೊಡುತ್ತೇನೆ. ಇಲ್ಲದಿದ್ದರೆ, ನಾನೇ ಅವರನ್ನು ಹುಡುಕಿ ಕೊಲ್ಲುತ್ತೇನೆ’ ಎಂದು ಅಯೋಧ್ಯೆಯ ಪರಮಹಂಸ ಆಚಾರ್ಯ ಸ್ವಾಮೀಜಿ ಸ್ಟಾಲಿನ್ ಅವರಿಗೆ ಬೆದರಿಕೆಯೊಡ್ಡಿದ್ದಾರೆ.

ತೂತುಕುಡಿಯಲ್ಲಿ ಡಿಎಂಕೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಉದಯನಿಧಿ, ನಾನು ಕರುಣಾನಿಧಿ ಮತ್ತು ಪೆರಿಯಾರ್ ಹಾಕಿಕೊಟ್ಟ ಮಾರ್ಗವನ್ನು ಮಾತ್ರ ಅನುಸರಿಸುತ್ತಿದ್ದೇನೆ. ಕರುಣಾನಿಧಿ ಅವರಿಗೂ ಇದೇ ಪರಿಸ್ಥಿತಿ ಎದುರಾಗಿತ್ತು. ಸಂತರೊಬ್ಬರು ಕರುಣಾನಿಧಿಯವರ ತಲೆಯನ್ನು ಯಾರಾದರೂ ಕತ್ತರಿಸಿದರೆ ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದ್ದರು. ಆಗ ಕರುಣಾನಿಧಿ ಅವರು, 'ನೀವು 100 ಕೋಟಿ ಕೊಟ್ಟರೂ, ಅವರಿಂದ ನನ್ನ ಕೂದಲನ್ನು ಸಹ ಅಲುಗಾಡಿಸಲು ಸಾಧ್ಯವಿಲ್ಲ' ಎಂದಿದ್ದರು. 

ನಾನು ಕೂಡ ಕರುಣಾನಿಧಿ, ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆಯುತ್ತಿದ್ದೇನೆ. ಪೆರಿಯಾರ್, ಅನ್ಬಳಗನ್ ಮತ್ತು ನಮ್ಮ ನಾಯಕ (ಎಂಕೆ ಸ್ಟಾಲಿನ್) ಅವರು ಸನಾತನ ಧರ್ಮ ನಿರ್ಮೂಲನೆಗೆ ಹೋರಾಡಿದರು ಮತ್ತು ಆ ಹೋರಾಟ ಮುಂದುವರಿಯುತ್ತದೆ ಎಂದರು.

'ಸನಾತನ ಧರ್ಮ' ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಸನಾತನ ಧರ್ಮವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. 

'ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಅವುಗಳನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯು, ಮಲೇರಿಯಾ ಅಥವಾ ಕೊರೊನಾವೈರಸ್ ಅನ್ನು ವಿರೋಧಿಸಲು ಸಾಧ್ಯವಿಲ್ಲ. ಬದಲಿಗೆ ನಾವು ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಶನಿವಾರ ಹೇಳಿದ್ದಾರೆ.

ಡಿಎಂಕೆ ನಾಯಕ  ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ಮಾಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಭಾರತೀಯ ರಾಷ್ಟ್ರೀಯ ಅಭಿವೃದ್ಧಿಯನ್ನು ಒಳಗೊಂಡ ಮೈತ್ರಿಕೂಟ (ಇಂಡಿಯಾ) ಕ್ಷಮೆಯಾಚಿಸಬೇಕೆಂದು ಬಿಜೆಪಿ ಒತ್ತಾಯಿಸಿತು.

ವಿವಿಧ ನಾಯಕರ ದಾಳಿಯಿಂದ ವಿಚಲಿತರಾಗದ ತಮಿಳುನಾಡು ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರು, ನಾನು ಮೊನ್ನೆ ಕಾರ್ಯಕ್ರಮವೊಂದರಲ್ಲಿ ಏನು ಹೇಳಿದ್ದೇನೋ ಮತ್ತೆ ಮತ್ತೆ ಅದನ್ನೇ ಹೇಳುತ್ತೇನೆ. ಕೇವಲ ಹಿಂದೂ ಧರ್ಮವನ್ನಷ್ಟೇ ಅಲ್ಲ, ಎಲ್ಲಾ ಧರ್ಮಗಳಲ್ಲಿನ ಜಾತಿ ತಾರತಮ್ಯವನ್ನು ಖಂಡಿಸುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com