ಹದಗೆಟ್ಟ ದ್ವಿಪಕ್ಷೀಯ ಸಂಬಂಧ: ಭಯೋತ್ಪಾದನೆ ಆರೋಪ ಎದುರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ: ಕೆನಡಾಗೆ ಭಾರತ ಆಗ್ರಹ

ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ತಿಕ್ಕಾಟ ಮುಂದುವರೆದಿದ್ದು, ಕೆನಡಾ ಮಾಡುತ್ತಿರುವ ಆರೋಪವನ್ನು ಭಾರತ ನಿರಾಕರಿಸಿದೆ. ಅಲ್ಲದೆ, ಭಯೋತ್ಪಾದನೆ ಆರೋಪ ಎದುರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಕೆನಡಾ ರಾಯಭಾರಿ ಕಚೇರಿ
ಕೆನಡಾ ರಾಯಭಾರಿ ಕಚೇರಿ

ನವದೆಹಲಿ: ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ತಿಕ್ಕಾಟ ಮುಂದುವರೆದಿದ್ದು, ಕೆನಡಾ ಮಾಡುತ್ತಿರುವ ಆರೋಪವನ್ನು ಭಾರತ ನಿರಾಕರಿಸಿದೆ. ಅಲ್ಲದೆ, ಭಯೋತ್ಪಾದನೆ ಆರೋಪ ಎದುರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಅವರು, ಕೆನಡಾ ಇತ್ತೀಚಿನ ದಿನಗಳಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಸುರಕ್ಷಿತ ಸ್ವರ್ಗವಾಗಿ ಪರಿಣಮಿಸಿದೆ. ಪಾಕಿಸ್ತಾನವು ಪ್ರತ್ಯೇಕತಾವಾದಿಗಳಿಗೆ ಹಣ ನೀಡುತ್ತಿದೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕೆನಡಾ ಸುರಕ್ಷಿತ ತಾಣವಾಗಬಾರದು, ಇದಕ್ಕೆ ಕೆನಡಾ ಅವಕಾಶ ನೀಡಬಾರದು. ಭಯೋತ್ಪಾದನೆ ಆರೋಪ ಹೊತ್ತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನ್ಯಾಯ ಎದುರಿಸಲು ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಹೇಳಿದ್ದಾರೆ.

ಕೆನಡಾದಲ್ಲಿ ಕುಳಿತು ಭಾರತದಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿರುವ ವ್ಯಕ್ತಿಗಳ ಬಗ್ಗೆ ನಿರ್ದಿಷ್ಟ ಪುರಾವೆಗಳನ್ನು ನಾವು ಹಂಚಿಕೊಂಡಿದ್ದೇವೆ. ಕೆನಡಾದಲ್ಲಿ ಭಯೋತ್ಪಾದಕರಿಗೆ ಸುರಕ್ಷಿತ ನೆಲೆಯನ್ನು ಒದಗಿಸಲಾಗಿದೆ. ಸುಮಾರು 20-25ಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ನಾವು ಹಲವು ವರ್ಷಗಳಿಂದ ವಿನಂತಿ ಮಾಡಿದ್ದೇವೆ. ಅಲ್ಲದೇ, ಇದಕ್ಕೆ ಸಂಬಂಧಿಸಿ ಅವರನ್ನು ತಮ್ಮದೇ ನೆಲದಲ್ಲಿ ವಿಚಾರಣೆ ನಡೆಸುವಂತೆಯೂ ತಿಳಿಸಿದ್ದೆವು. ಆದರೆ, ಭಾರತಕ್ಕೆ ಕೆನಡಾವು ಯಾವುದೇ ನೆರವು ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಈ ನಡುವೆ ಉಭಯ ರಾಷ್ಟ್ರಗಳು ಆಯಾ ದೇಶಗಳು ನೇಮಕ ಮಾಡಿದ್ದ ರಾಜತಾಂತ್ರಿಕ ಅಧಿಕಾರಿಗಳನ್ನು ಅಮಾನತು ಮಾಡಿವೆ. ಭಾರತವು ಕೆನಡಿಯನ್ನರ ವೀಸಾ ಸೇವೆಯನ್ನು ರದ್ದು ಮಾಡಿದೆ.

ಭಾರತಕ್ಕೆ ಭೇಟಿ ನೀಡಬಯಸುವ ಅಲ್ಲಿನ ಪ್ರಜೆಗಳ ವೀಸಾ ಅರ್ಜಿ ಆರಂಭಿಕ ಪರಿಶೀಲನೆಗೆ ನೇಮಕಗೊಂಡಿರುವ ಸಂಸ್ಥೆ ಬಿಎಲ್‌ಎಸ್‌ ಇಂಟರ್‌ನ್ಯಾಷನಲ್‌, ‘ಕಾರ್ಯಾಚರಣೆಯ ಕಾರಣಗಳಿಗಾಗಿ’ ವೀಸಾ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವುದಾಗಿ ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ವೆಬ್‌ಸೈಟ್‌ನ ಕೆನಡಾ ಪುಟದಲ್ಲಿ ಹಾಕಿದ್ದ ಸೂಚನೆಯನ್ನು ಸಂಸ್ಥೆ ಒಂದು ತಾಸಿನೊಳಗೇ ಹಿಂದಕ್ಕೆ ಪಡೆದು ಮತ್ತೆ ವೆಬ್‌ಸೈಟ್‌ನಲ್ಲಿ ಪ್ರಕಟಣೆ ನೀಡಿದೆ.

ಭಾರತದಿಂದ ಪ್ರಮುಖ ಸೂಚನೆ, ಕಾರ್ಯಾಚರಣೆಯ ಕಾರಣ ಭಾರತದ ವೀಸಾ ಸೇವೆಗಳನ್ನು ಇದೇ 21ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಬಿಎಲ್‌ಎಸ್‌ ವೆಬ್‌ಸೈಟ್ ಗಮನಿಸಿ’ ಎಂದು ಹೇಳಿದೆ.

ಪಂಜಾಬ್‌ನ ಜಲಂಧರ್‌ ನಿವಾಸಿ ಹರ್ದೀಪ್ ಸಿಂಗ್ ನಿಜ್ಜರ್, ಕೆನಡಾ ದೇಶಕ್ಕೆ ಪರಾರಿಯಾಗಿದ್ದನು. ಭಾರತದಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಈತ, ಕೆನಡಾದಲ್ಲಿ ವಲಸೆ ಹೋಗಿ ಖಲಿಸ್ತಾನ್‌ ಉಗ್ರರ ನಾಯಕನಾಗಿದ್ದ. ಕೆನಡಾ ದೇಶದ ಸರ್ರೆ ಎನ್ನುವ ಪ್ರದೇಶದಲ್ಲಿರುವ ಗುರುದ್ವಾರದ ಹೊರಗೆ 2023ರ ಜುಲೈ 18 ರಂದು ಅಪರಿಚಿತ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಈತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಯ ಗುಂಪಿನ ಮುಖಂಡ ಹರ್ದೀಪ್‌ ಸಿಂಗ್ ನಿಜ್ಜರ್‌ನ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಕೆನಡಾ ಸಂಸತ್‌ನಲ್ಲೇ ಗಂಭೀರ ಆರೋಪ ಮಾಡಿದ್ದರು. ಆ ಹೇಳಿಕೆಯ ಬಳಿಕ ಭಾರತ-ಕೆನಡಾ ನಡುವೆ ಶೀತಲ ಸಮರ ಆರಂಭವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com