ಭಾರತದಲ್ಲಿ ವರದಿಯಾಗುತ್ತಿರುವುದಕ್ಕಿಂತ ನಿಜವಾದ ಕೋವಿಡ್ ಪ್ರಕರಣಗಳು 17 ಪಟ್ಟು ಹೆಚ್ಚಿವೆ: ಬಿಎಚ್‌ಯು ಅಧ್ಯಯನ

ಭಾರತದಲ್ಲಿ ನಿಜವಾದ ಕೋವಿಡ್-19 ಪ್ರಕರಣಗಳ ಸಂಖ್ಯೆ ಈಗ ಲಭ್ಯವಿರುವ ಅಧಿಕೃತ ಅಂಕಿಅಂಶಕ್ಕಿಂತ ಸುಮಾರು 17 ಪಟ್ಟು ಹೆಚ್ಚಿರಬಹುದು ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಸಂಶೋಧಕರ ನೇತೃತ್ವದ ಅಧ್ಯಯನವು ಸೂಚಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದಲ್ಲಿ ನಿಜವಾದ ಕೋವಿಡ್-19 ಪ್ರಕರಣಗಳ ಸಂಖ್ಯೆ ಈಗ ಲಭ್ಯವಿರುವ ಅಧಿಕೃತ ಅಂಕಿಅಂಶಕ್ಕಿಂತ ಸುಮಾರು 17 ಪಟ್ಟು ಹೆಚ್ಚಿರಬಹುದು ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಸಂಶೋಧಕರ ನೇತೃತ್ವದ ಅಧ್ಯಯನವು ಸೂಚಿಸಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಇದುವರೆಗೆ ಸುಮಾರು 4.5 ಕೋಟಿ ಜನರು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ.

ಆದಾಗ್ಯೂ, ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಇನ್‌ಫೆಕ್ಷಿಯಸ್ ಡಿಸೀಸ್ (ಐಜೆಐಡಿ) ನಲ್ಲಿ ಪ್ರಕಟವಾದ ಅಧ್ಯಯನವು ದೇಶದಲ್ಲಿ ನಿಜವಾದ ಕೊರೊನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 58 ರಿಂದ 98 ಕೋಟಿಗಳ ನಡುವೆ ಇರಬಹುದು ಎಂದು ಅಂದಾಜಿಸಿದೆ.

ಬಿಎಚ್‌ಯುನ ಹೇಳಿಕೆಯ ಪ್ರಕಾರ, 'ಭಾರತದಲ್ಲಿ ನಿಜವಾದ ಕೋವಿಡ್ ಪ್ರಕರಣಗಳ ಸಂಖ್ಯೆ ವರದಿಯಾಗುತ್ತಿರುವುದಕ್ಕಿಂತ 17 ಪಟ್ಟು ಹೆಚ್ಚಾಗಿದೆ ಎಂದು ಸಂಶೋಧನೆಯು ತೋರಿಸಿದೆ'.

'ನಮ್ಮ ಅಧ್ಯಯನದಲ್ಲಿ ಕಂಡುಬರುತ್ತಿರುವ ಮತ್ತು ಈಗಿರುವ ಪ್ರಕರಣಗಳ ನಡುವಿನ ವ್ಯತ್ಯಾಸಕ್ಕೆ ಕಾರಣವೆಂದರೆ, ಅಗಾಧ ಸಂಖ್ಯೆಯ ಲಕ್ಷಣರಹಿತ ಜನರಿರುವುದಾಗಿದೆ. ಹೀಗಾಗಿ ಅಧಿಕೃತ ಮಾಹಿತಿಗಿಂತ ನಿಜವಾದ ಪ್ರಕರಣಗಳ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ' ಎಂದು ಬಿಎಚ್‌ಯು ತಳಿಶಾಸ್ತ್ರಜ್ಞ ಪ್ರೊಫೆಸರ್ ಜ್ಞಾನೇಶ್ವರ್ ಚೌಬೆ ಹೇಳಿದರು.

ರೋಗಲಕ್ಷಣಗಳಿಲ್ಲದ ಪ್ರಕರಣಗಳು ಯುವ ಜನಸಂಖ್ಯೆಯ ಕಡೆಗೆ ಹೆಚ್ಚು ಒಲವು ತೋರುತ್ತಿವೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಚೌಬೆ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಈ ಅಧ್ಯಯನವು ದೇಶದಾದ್ಯಂತ 34 ಸಂಶೋಧನಾ ಸಂಸ್ಥೆಗಳ 88 ವಿಜ್ಞಾನಿಗಳನ್ನು ಒಳಗೊಂಡಿತ್ತು. ತಂಡವು 2020ರ ಸೆಪ್ಟೆಂಬರ್-ಡಿಸೆಂಬರ್ ಅವಧಿಯಲ್ಲಿ ಆರು ರಾಜ್ಯಗಳ ಹದಿನಾಲ್ಕು ನಗರ ಪ್ರದೇಶಗಳಲ್ಲಿ 2,301 ವ್ಯಕ್ತಿಗಳಲ್ಲಿ ಸೆರೋಸರ್ವೆ (ಪ್ರತಿಕಾಯ ಪರೀಕ್ಷೆ) ನಡೆಸಿತು.

ಈ ಅಧ್ಯಯನದ ಅತ್ಯಂತ ಗಮನಾರ್ಹ ಅಂಶವೆಂದರೆ, ಭಾರತೀಯ ಜನಸಂಖ್ಯೆಯ ಹೆಚ್ಚಿನ ಭಾಗವು ಲಕ್ಷಣರಹಿತ ಕೋವಿಡ್ ಅನ್ನು ಹೊಂದಿದ್ದಾರೆ ಮತ್ತು 26-35 ವಯಸ್ಸಿನವರು ಗರಿಷ್ಠ ಸಂಖ್ಯೆಯ ಲಕ್ಷಣರಹಿತ ಸೋಂಕನ್ನು ಹೊಂದಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.

ಯಾವುದೇ ಕೊರೊನಾವೈರಸ್ ಅಲೆಯ ನಂತರ ಜನರಲ್ಲಿ ಪ್ರತಿಕಾಯ ಪರೀಕ್ಷೆಗಳು ನಿಜವಾದ ಸೋಂಕನ್ನು ನಿಖರವಾಗಿ ನಿರ್ಣಯಿಸುತ್ತದೆ. 

ಈ ತಂಡವು ಕೊರೊನಾ ಸೋಂಕಿನ ಅಪಾಯದಲ್ಲಿರುವ ಹದಿನಾಲ್ಕು ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ವಾಸಿಸುವ ದೊಡ್ಡ ಸಂಖ್ಯೆಯ ಜನರ ಪೈಕಿ ಬೀದಿಬದಿ ವ್ಯಾಪಾರಿಗಳ ನಡುವೆ ಸಂಶೋಧನೆ ನಡೆಸಿತು.

ಎಂದಿಗೂ ಯಾವುದೇ ಕೋವಿಡ್ ರೋಗಲಕ್ಷಣಗಳನ್ನು ಹೊಂದಿಲ್ಲ ಅಥವಾ ಧನಾತ್ಮಕ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಹೊಂದಿಲ್ಲ ಎನ್ನುವ ವ್ಯಕ್ತಿಗಳಿಂದ ಮಾತ್ರ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.

ಸರ್ಕಾರವು ವರದಿ ಮಾಡಿದ ಪ್ರಕರಣಗಳ ಅಂಕಿಅಂಶಗಳು ನಿಜವಾದ ಸೋಂಕು ಪ್ರಕರಣಗಳಿಗಿಂತ ಹಲವಾರು ಪಟ್ಟು ಕಡಿಮೆಯಾಗಿದೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ.

ಸದ್ಯ ಭಾರತದಲ್ಲಿ ವರದಿಯಾದ ಪ್ರಕರಣಗಳೆಷ್ಟು?

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಬುಧವಾರ 96 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,785 ಕ್ಕೆ ಏರಿದೆ. ಈ ಮೂಲಕ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 4.46 ಕೋಟಿ (4,46,83,639) ಆಗಿದೆ.

ಉತ್ತರ ಪ್ರದೇಶದಿಂದ ಒಂದು ಸಾವು ವರದಿಯಾಗುವುದರೊಂದಿಗೆ ಸಾವಿನ ಸಂಖ್ಯೆ 5,30,746ಕ್ಕೆ ಏರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com