ಉತ್ತರ ಪ್ರದೇಶ: ಗರ್ಭಿಣಿ ಪತ್ನಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ಮದ್ಯವ್ಯಸನಿ ಪತಿ
ಮದ್ಯವ್ಯಸನಿ ಪತಿ ತನ್ನ ಕುಡಿಯುವ ಚಟವನ್ನು ವಿರೋಧಿಸಿದ್ದಕ್ಕೆ ಗರ್ಭಿಣಿಯಾಗಿದ್ದ ಪತ್ನಿಯನ್ನು ತನ್ನ ಮೋಟಾರ್ ಸೈಕಲ್‌ಗೆ ಕಟ್ಟಿ 200 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದ ಆಘಾತಕಾರಿ ಘಟನೆ ನಡೆದಿದೆ.
Published: 15th January 2023 09:54 AM | Last Updated: 15th January 2023 09:54 AM | A+A A-

ಸಾಂದರ್ಭಿಕ ಚಿತ್ರ
ಪಿಲಿಭಿತ್: ಮದ್ಯವ್ಯಸನಿ ಪತಿ ತನ್ನ ಕುಡಿಯುವ ಚಟವನ್ನು ವಿರೋಧಿಸಿದ್ದಕ್ಕೆ ಗರ್ಭಿಣಿಯಾಗಿದ್ದ ಪತ್ನಿಯನ್ನು ತನ್ನ ಮೋಟಾರ್ ಬೈಕ್‌ಗೆ ಕಟ್ಟಿ 200 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದ ಆಘಾತಕಾರಿ ಘಟನೆ ನಡೆದಿದೆ.
ಶನಿವಾರ ಘುಂಗ್‌ಚೈ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಾಮ್‌ಗೋಪಾಲ್‌ನನ್ನು ಬಂಧಿಸಲಾಗಿದೆ. ಪತ್ನಿ ಸುಮನ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, ರಾಮ್ ಗೋಪಾಲ್ ಶನಿವಾರ ಕುಡಿದು ಮನೆಗೆ ಬಂದಾಗ, ಸುಮನ್ ಇದನ್ನು ವಿರೋಧಿಸಿದ್ದಾರೆ. ಇದರಿಂದ ಕೋಪಗೊಂಡ ರಾಮ್, ಮೊದಲು ಆಕೆಯನ್ನು ಥಳಿಸಿ ನಂತರ ಬೈಕ್‌ಗೆ ಕಟ್ಟಿಹಾಕಿ ಬೈಕ್ ಓಡಿಸಿದ್ದಾನೆ.
ದಾರಿಹೋಕರು ರಾಮ್ ಗೋಪಾಲ್ ಅವರನ್ನು ತಡೆಯಲು ಪ್ರಯತ್ನಿಸಿದರಾದರೂ, ಆತ ಅವರ ಮಾತು ಕೇಳಲು ನಿರಾಕರಿಸಿದ್ದಾನೆ. ಕೊನೆಗೆ ಸುಮನ್ ಸಹೋದರ ತನ್ನ ಸೋದರಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ರಾಮ್ ಗೋಪಾಲ್ ಮತ್ತು ಸುಮನ್ ಮೂರು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಕೆಲ ದಿನಗಳಲ್ಲೇ ಪತಿ ಡ್ರಗ್ಸ್ ಚಟಕ್ಕೆ ಬಿದ್ದಿದ್ದನು ಎಂದು ಸುಮನ್ ಆರೋಪಿಸಿದ್ದಾರೆ.
ಈಗ ಎಂಟು ತಿಂಗಳ ಗರ್ಭಿಣಿಯಾಗಿರುವ ಸುಮನ್ ಅವರು, ಪತಿಯ ಕುಡಿತದ ಚಟಕ್ಕೆ ಆಗಾಗ್ಗೆ ಜಗಳವಾಡುತ್ತಿದ್ದರು. ಘಟನೆ ವೇಳೆ ರಾಮ್ ಗೋಪಾಲ್ ಅವರ ಸಹೋದರ ಮತ್ತು ತಾಯಿ ಮನೆಯಲ್ಲಿದ್ದರು. ರಾಮ್ ಗೋಪಾಲನನ್ನು ತಡೆಯಲು ಅವರಿಗೂ ಸಾಧ್ಯವಾಗಿಲ್ಲ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ರಾಮ್ ಗೋಪಾಲ್‌ನನ್ನು ವಶಕ್ಕೆ ಪಡೆದಿದ್ದಾರೆ.
ವಿವಾಹಿತ ಮಹಿಳೆಯ ಸಹೋದರ ವೈಶ್ಪಾಲ್ ನೀಡಿದ ದೂರಿನ ಮೇರೆಗೆ ಸುಮನ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಎಳೆದಾಡಿ ಥಳಿಸಿರುವ ಆರೋಪದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಘುಂಗ್‌ಚಾಯ್ ಠಾಣಾಧಿಕಾರಿ ರಾಜೇಂದ್ರ ಸಿಂಗ್ ಸಿರೋಹಿ ತಿಳಿಸಿದ್ದಾರೆ.