ಬೆರ್ಹಾಂಪುರ: ಬಸ್ ಮತ್ತು ತೈಲ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಘಟನೆಯಲ್ಲಿ ಐವರು ಸಾವನ್ನಪ್ಪಿ, 13 ಮಂದಿ ಗಾಯಗೊಂಡಿರುವ ಘಟನೆ ಗಂಜಾಂ ಜಿಲ್ಲೆಯ ಹಿಂಜಿಲಿ ಪೊಲೀಸ್ ವ್ಯಾಪ್ತಿಯ ಸಮರ್ಜೋಲಾ ಚೌಕ್‌ನಲ್ಲಿ ಗುರುವಾರ ನಡೆದಿದೆ.
ಇಂದು ಬೆಳಿಗ್ಗೆ 5.30ರ ಸುಮಾರಿಗೆ ಅಸ್ಕಾದಿಂದ ಬರ್ಹಾಂಪುರಕ್ಕೆ ತೆರಳುತ್ತಿದ್ದ ಬಸ್ ಎದುರುಗಡೆ ಬರುತ್ತಿದ್ದ ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಬಸ್-ಟ್ಯಾಂಕರ್ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿದ್ದ ಟೀ ಅಂಗಡಿಗೆ ನುಗ್ಗಿವೆ. ಪರಿಣಾಮ ಅಂಗಡಿ ಬಳಿ ಟೀ ಕುಡಿಯುತ್ತಿದ್ದ ಮೂವರು ಮತ್ತು ಬಸ್ ನಲ್ಲಿದ್ದ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಈ ನಡುವೆ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗಾಯಾಳುಗಳನ್ನು ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದರು.
ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿಬ್ಯಜ್ಯೋತಿ ಪರಿದಾ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದರು.
ಘಟನೆಗೆ ಒಡಿಶಾ ಸಿಎಂ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ತೀವ್ರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
Advertisement