ಉಭಯ ಸದನದಲ್ಲಿ ಕಡ್ಡಾಯ ಹಾಜರಾತಿಗೆ ಸಂಸದರಿಗೆ ಬಿಜೆಪಿ ವಿಪ್; ಕುತೂಹಲ ಕೆರಳಿಸಿದ ಕೇಂದ್ರದ ನಡೆ!

ಮಹತ್ವದ ಬೆಳವಣಿಗೆಯಲ್ಲಿ ನಾಳಿನ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಬಿಜೆಪಿ ಸಂಸದರು ಮತ್ತು ರಾಜ್ಯಸಭಾ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ.
ಸಂಸತ್ ಕಲಾಪದಲ್ಲಿ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಸಂಸತ್ ಕಲಾಪದಲ್ಲಿ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ನಾಳಿನ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಬಿಜೆಪಿ ಸಂಸದರು ಮತ್ತು ರಾಜ್ಯಸಭಾ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ.

ಇಂದಿಗೆ ಅಂತ್ಯವಾಗಬೇಕಿದ್ದ ಬಜೆಟ್ ಅಧಿವೇಶನವನ್ನು ಕೇಂದ್ರ ಸರ್ಕಾರ ಒಂದು ದಿನ ವಿಸ್ತರಣೆ ಮಾಡಿದ್ದು, ಇದೀಗ ಕಲಾಪದ ಅಂತಿಮ ದಿನ ತನ್ನೆಲ್ಲಾ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ಕಡ್ಡಾಯವಾಗಿ ಕಲಾಪದಲ್ಲಿ ಹಾಜರಿರುವಂತೆ ವಿಪ್ ಜಾರಿಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಈ ನಡೆ ನಾಳಿನ ಕಲಾಪದಲ್ಲಿ ಮೋದಿ ಸರ್ಕಾರದ ನಡೆಯತ್ತ ಕುತೂಹಲ ಕೆರಳಿಸುವಂತೆ ಮಾಡಿದೆ.

ಬಜೆಟ್ ಅಧಿವೇಶನದ ಕೊನೆಯ ದಿನ ಅಂದರೆ ನಾಳೆ ಫೆಬ್ರವರಿ 10 ಕೆಲ ಪ್ರಮುಖ ಶಾಸಕಾಂಗ ವ್ಯವಹಾರಗಳ ಕುರಿತು ಸದನದಲ್ಲಿ ಚರ್ಚೆ ನಡೆಸಲಾಗುತ್ತದೆ. ಹೀಗಾಗಿ ಎಲ್ಲರು ಕಡ್ಡಾವಾಗಿ ಹಾಜರಾತಿ ಇರಬೇಕು ಎಂದು ಬಿಜೆಪಿ ಮುಖ್ಯ ಸಚೇತಕ ಲಕ್ಷ್ಮೀಕಾಂತ್ ಬಾಜ್‌ಪೇಯ್ ವಿಪ್ ಹೊರಡಿಸಿದ್ದಾರೆ. ಲೋಕಸಭಾ ಚುನಾವಣೆ ಅಖಾಡಕ್ಕಿಳಿಯುವ ಮೊದಲು ನಡೆಯುತ್ತಿರುವ ಕೊನೆಯ ಅಧಿವೇಶನ ಇದಾಗಿದೆ. ಹೀಗಾಗಿ ಪ್ರಧಾನಿ ಮೋದಿ ಸರ್ಕಾರ ಕೆಲ ಅಚ್ಚರಿ ನೀಡುವ ಸಾಧ್ಯತೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಸದನದಲ್ಲಿ ಕೆಲ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲು ಉದ್ದೇಶಿಸಲಾಗಿದ್ದು, ಉಭಯ ಸದನದಲ್ಲಿ ಈ ಕುರಿತು ಚರ್ಚೆ ನಡೆಯಲಿದೆ. ಹೀಗಾಗಿ ಬಿಜೆಪಿಯ ಲೋಕಸಭಾ ಹಾಗೂ ರಾಜ್ಯಸಭೆಯ ಎಲ್ಲಾ ಸದಸ್ಯರು ಎರಡೂ ಸದನದಲ್ಲಿ ಹಾಜರರಿಬೇಕು. ಸಂಪೂರ್ಣ ದಿನ ಸದನದಲ್ಲಿ ಹಾಜರಿದ್ದು, ಸರ್ಕಾರದ ನಿರ್ಧಾರವನ್ನು ಬೆಂಬಲಿಸಲು ಈ ಮೂಲಕ ಕೋರಲಾಗಿದೆ ಎಂದು ಲಕ್ಷ್ಮೀಕಾಂತ್ ಬಾಜ್‌ಪೇಯ್ ವಿಪ್ ಹೊರಡಿಸಿದ್ದಾರೆ.

ಶ್ವೇತಪತ್ರ ಕೋಲಾಹಲ
ಇನ್ನು ಕೇಂದ್ರ ಸರ್ಕಾರ ಸದನದಲ್ಲಿ ಮಂಡಿಸಿರುವ ಶ್ವೇತಪತ್ರ ಕೋಲಾಹಲ ಸೃಷ್ಟಿಸಿದ್ದು, ಹಿಂದಿನ ಮನಮೋಹನ ಸಿಂಗ್‌ ಅವಧಿಯ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 10 ವರ್ಷಗಳ ಅವಧಿಯಲ್ಲಿ ದೇಶವನ್ನು ಎಲ್ಲಾ ರಂಗದಲ್ಲೂ ಅಧಃಪತನದತ್ತ ಕೊಂಡೊಯ್ದಿದೆ ಎಂದು ಎನ್‌ಡಿಎ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಿದೆ. ‘2004ರಲ್ಲಿ ಎನ್‌ಡಿಎ ಸರ್ಕಾರದ ಆಡಳಿತ ಅಂತ್ಯಗೊಂಡು ಯುಪಿಎ ಸರ್ಕಾರಕ್ಕೆ ಆಡಳಿತಕ್ಕೆ ಬಂದಾಗ ಆರೋಗ್ಯಕರ ಆರ್ಥಿಕತೆಯನ್ನು ದೇಶ ಹೊಂದಿತ್ತು. ಆದರೆ 2004ರಿಂದ 2014ರವರೆಗಿನ 10 ವರ್ಷಗಳಲ್ಲಿ ಯುಪಿಎ ಸರ್ಕಾರ ಈ ಆರ್ಥಿಕತೆಯನ್ನು ಹಾಳುಮಾಡಿತು ಎಂದು ದಾಖಲೆ ಸಮೇತ ಶ್ವೇತಪತ್ರದಲ್ಲಿ ಕೇಂದ್ರ ಸರ್ಕಾರ ಗಂಭೀರ ಆರೋಪ ಮಾಡಿದೆ.

ಅಲ್ಲದೆ ಶ್ವೇತಪತ್ರದಲ್ಲಿ ಕಲ್ಲಿದ್ದಲು ಹಗರಣವನ್ನು ಉಲ್ಲೇಖಿಸಲಾಗಿದ್ದು, ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯನ್ನು "ನಿರಂಕುಶ ಆಧಾರದ ಮೇಲೆ" ಮಾಡಲಾಗಿದೆ ಎಂದು ಕೇಂದ್ರ ಆರೋಪಿಸಿದೆ.

ಫೆ.27ರಂದು ರಾಜ್ಯಸಭಾ ಚುನಾವಣೆ
ರಾಜ್ಯಸಭೆಯಲ್ಲಿ ತೆರವಾಗಿರುವ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ಫೆಬ್ರವರಿ 15 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಫೆಬ್ರವರಿ27ರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಮತ ಏಣಿಕೆ ನಡೆಯಲಿದೆ. ಈ ಎಲ್ಲಾ ಕಾರಣಗಳಿಂದ ನಾಳಿನ ಕಲಾಪ ಅತ್ಯಂತ ಕುತೂಹಲ ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com