
ಮುಂಬೈ: ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಫೈನಲ್ ನಲ್ಲಿ ಮಣಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಇಂದು ಸ್ವದೇಶಕ್ಕೆ ಆಗಮಿಸಿದ್ದು ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ತಂಡದ ಆಟಗಾರರಿಗೆ ವಾಟರ್ ಸಲ್ಯೂಟ್ ಗೌರವ ನೀಡಲಾಯಿತು.
ದೆಹಲಿಯಿಂದ ಮುಂಬೈಗೆ ಟೀಂ ಇಂಡಿಯಾ ಆಟಗಾರರನ್ನು ಹೊತ್ತು ತಂದ ವಿಶೇಷ ವಿಮಾನ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ವಿಮಾನ ನಿಲ್ದಾಣದ ಸಿಬ್ಬಂದಿ ರನ್ ವೇ ನಲ್ಲಿಯೇ ವಿಮಾನಕ್ಕೆ ವಾಟರ್ ಜೆಟ್ ವಾಹನಗಳಿಂದ ನೀರನ್ನು ಸಿಂಪಡಿಸುವ ಮೂಲಕ ಆಟಗಾರರ ಸಾಧನೆಗೆ ಗೌರವ ವಂದನೆ ಸಲ್ಲಿಸಿದರು.
ವಿಮಾನವಿದ್ದ ರನ್ ವೇ ಎರಡೂ ಬದಿಯಲ್ಲಿದ್ದ ವಾಟರ್ ಜೆಟ್ ವಾಹನಗಳು ವಿಮಾನದ ಮೇಲೆ ನೀರು ಹಾಯಿಸುವ ಮೂಲಕ ವಿಶ್ವ ವಿಜೇತ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಿತು.
ಬೆರಿಲ್ ಚಂಡಮಾರುತದಿಂದ ತಡವಾಗಿ ತವರಿಗೆ ಬಂದ ಟೀಂ ಇಂಡಿಯಾ
ಬಾರ್ಬಡೋಸಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ರೋಚಕ ಜಯ ಗಳಿಸುವ ಮೂಲಕ ಭಾರತ ತಂಡ ಚಾಂಪಿಯನ್ ಆಗಿತ್ತು. ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ ಬಹುಮಾನ ಘೋಷಿಸಿದೆ. ಇದೇ ಸಂಭ್ರಮದಲ್ಲಿದ್ದ ಟೀಂ ಇಂಡಿಯಾಗೆ ಬಾರ್ಬಡೋಸ್ ಹವಾಮಾನ ವೈಪರೀತ್ಯ ಆಘಾತ ನೀಡಿತ್ತು.
ಬೆರಿಲ್ ಚಂಡಮಾರುತ ಅಪ್ಪಳಿಸಿದ ಪರಿಣಾಮ ಇಡೀ ಬಾರ್ಬಡೋಸ್ ಅಘೋಷಿತ ತುರ್ತು ಪರಿಸ್ಥಿತಿಗೆ ಒಳಗಾಗಿ, ಎಲ್ಲ ರೀತಿಯ ಸೇವೆಗಳು ಸ್ಥಗಿತವಾಗಿತ್ತು. ಬಸ್, ರೈಲು, ವಿಮಾನ ಸೇರಿದಂತೆ ಎಲ್ಲ ಬಗೆಯ ಸಂಚಾರ ವ್ಯವಸ್ಥೆ ಸ್ಥಗಿತವಾಗಿತ್ತು.
2 ದಿನಗಳ ಬಳಿಕ ಚಂಡಮಾರುತದ ಅಬ್ಬರ ಇಳಿದ ಬಳಿಕ ಬಾರ್ಬಡೋಸ್‌ನಲ್ಲಿಯೇ ಉಳಿದಿದ್ದ ಟೀಮ್ ಇಂಡಿಯಾ ಆಟಗಾರರು ನಿನ್ನೆ ಭಾರತದತ್ತ ಪಯಣ ಬೆಳೆಸಿದ್ದರು. ಇಂದು ದೆಹಲಿಗೆ ಬಂದಿಳಿದು, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುಮಾರು ಎರಡು ಗಂಟೆ ಕಾಲಕಳೆದಿದ್ದರು. ಇದೀಗ ವಿಕ್ಟರಿ ಪರೇಡ್ ಗಾಗಿ ಮುಂಬೈಗೆ ಆಗಮಿಸಿದ್ದಾರೆ.
Advertisement