ಹರ್ಯಾಣ: ಹರ್ಯಾಣ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಕರ್ನಾಟಕದ ಮುಡಾ ಹಗರಣ ಸದ್ದು ಮಾಡುತ್ತಿದೆ.
ಸೋನಿಪತ್ ನಲ್ಲಿ ಇಂದು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಮುಡಾ ಹಗರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 2 ವರ್ಷಗಳು ಪೂರ್ತಿ ಆಗಿಲ್ಲ ಅಲ್ಲಿ ಯಾವ ಪರಿಸ್ಥಿತಿ ಇದೆ ನೋಡಿ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಟೀಕಾ ಪ್ರಹಾರ ನಡೆಸಿದ್ದಾರೆ.
ಮುಡಾ ಹಗರಣದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಯಾಗಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ಸಿದ್ದರಾಮಯ್ಯ ವಿರುದ್ದ ತನಿಖೆ ಆಗಲೇಬೇಕು. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 2 ವರ್ಷವೂ ಆಗಿಲ್ಲ. ಈ ರೀತಿ ಭ್ರಷ್ಟಾಚಾರ ಮಾಡಿದ ಪಕ್ಷಕ್ಕೆ ಹರಿಯಾಣದಲ್ಲಿ ಅವಕಾಶ ಕೊಡುತ್ತೀರಾ? ಎಂದು ಹರಿಯಾಣದ ಜನತೆಯನ್ನು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.
ಗ್ಯಾರೆಂಟಿ ಯೋಜನೆಗಳ ವಿರುದ್ಧವೂ ವ್ಯಂಗ್ಯವಾಡಿರುವ ಪ್ರಧಾನಿ ಮೋದಿ, ಕರ್ನಾಟಕ ಕಾಂಗ್ರೆಸ್ ಕರ್ನಾಟಕದಲ್ಲಿ ಕಾಂಗ್ರೆಸ್ ನಕಲಿ ಯೋಜನೆಗಳನ್ನು ಘೋಷಿಸಿದೆ. ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ದಲಿತರ ಹಣ ಲೂಟಿ ಮಾಡಿದೆ ಎಂದು ವಾಲ್ಮೀಕಿ ಹಗರಣವನ್ನು ಉಲ್ಲೇಖಿಸಿ ಮೋದಿ ಟೀಕಾ ಪ್ರಹಾರ ಮಾಡಿದ್ದಾರೆ.
ಭಾರತದ ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಜನ್ಮ ನೀಡಿದ ಮತ್ತು ಪೋಷಿಸಿದ ಪಕ್ಷ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಭ್ರಷ್ಟಾಚಾರದ ತಾಯಿ ಎಂದು ಸೋನಿಪತ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಟೀಕಾ ಪ್ರಹಾರ ನಡೆಸಿದ್ದಾರೆ. ಹರ್ಯಾಣ ‘ಫಿರ್ ಏಕ್ ಬಾರ್ ಬಿಜೆಪಿ ಸರ್ಕಾರ್’ ಎಂದು ಹೇಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Advertisement