
ಚೆನ್ನೈ: ಎಐಎಡಿಎಂಕೆ ಜೊತೆಗಿನ ಮೈತ್ರಿಗಾಗಿ ಕೆ ಅಣ್ಣಾಮಲೈ (K Annamalai) ಅವರನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಲಾಗಿದೆ ಎಂಬ ವದಂತಿಗಳನ್ನು ಅಲ್ಲಗಳೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ 'ಈಗಲೂ ಅಣ್ಣಾಮಲೈ ಅವರೇ ತಮಿಳುನಾಡು ರಾಜ್ಯಾಧ್ಯಕ್ಷರಾಗಿದ್ದು, ರಾಜ್ಯದಲ್ಲಿ ಅವರು ಪಕ್ಷದ ಪ್ರಮುಖ ನಾಯಕರಾಗಿದ್ದಾರೆ ಎಂದು ಹೇಳಿದರು.
ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, 'ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿಯನ್ನು ನವೀಕರಿಸಲಾಗುತ್ತಿದೆ ಎಂದು ಘೋಷಿಸಿದರು. ವದಂತಿಗಳು ನಿಜವಲ್ಲ.. ಅಣ್ಣಾಮಲೈ ಇಂದಿಗೂ ರಾಜ್ಯ ಅಧ್ಯಕ್ಷ ಹುದ್ದೆಯಲ್ಲಿದ್ದಾರೆ. ಅವರ ಕಾರಣದಿಂದಾಗಿಯೇ ಇಂದು ಕೆ ಪಳನಿಸ್ವಾಮಿ ನನ್ನೊಂದಿಗೆ ಕುಳಿತಿದ್ದಾರೆ ಎಂದು ಕೈ ತೋರಿಸಿ ನಕ್ಕರು. ಈ ವೇಳೆ ಪಳನಿಸ್ವಾಮಿ ಕೂಡ ನಕ್ಕು ಸುಮ್ಮನಾದರು.
ಇದೇ ವೇಳೆ ಅಣ್ಣಾಮಲೈ ಅವರಿಗೆ ಕೇಂದ್ರ ಹುದ್ದೆ ನೀಡುವ ಕುರಿತು ಮಾತನಾಡಿದ ಅಮಿತ್ ಶಾ, 'ಅದು ನಮ್ಮ ಪಕ್ಷಕ್ಕೆ ಸಂಬಂಧಿಸಿದ ಆತಂರಿಕ ವಿಚಾರ. ನನ್ನ ಪಕ್ಷದ ಬಗ್ಗೆ ಹೆಚ್ಚು ಚಿಂತಿಸಬೇಡಿ, ನಾವು ಅದನ್ನು ಚೆನ್ನಾಗಿ ನಡೆಸುತ್ತೇವೆ" ಎಂದು ಹೇಳಿದರು.
ತಮಿಳುನಾಡು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಗೆ ತಿರುನಲ್ವೇಲಿ ಶಾಸಕ ಮತ್ತು ಪ್ರಸ್ತುತ ಉಪಾಧ್ಯಕ್ಷರಾಗಿರುವ ನೈನಾರ್ ನಾಗೇಂದ್ರನ್ ಅವರಿಂದ ಕೇವಲ ಒಂದು ನಾಮನಿರ್ದೇಶನ ಬಂದಿದ್ದು, ಅವರು ಅವಿರೋಧವಾಗಿ ಆಯ್ಕೆಯಾಗಲು ದಾರಿ ಮಾಡಿಕೊಟ್ಟ ದಿನವೇ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.
ಅಚ್ಕರಿ ಎಂದರೆ ನಾಗೇಂದ್ರನ್ ಅವರ ಹೆಸರನ್ನು ಅಣ್ಣಾಮಲೈ ಮತ್ತು ಇತರ ಮೂವರು ಹಿರಿಯ ನಾಯಕರು ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಅವರಲ್ಲಿ ಅಣ್ಣಾಮಲೈ ಅವರ ಪೂರ್ವವರ್ತಿ ಮತ್ತು ಕೇಂದ್ರ ಸಚಿವ ಎಲ್ ಮುರುಗನ್ ಮತ್ತು ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಕೂಡ ಸೇರಿದ್ದಾರೆ.
ಅಂದಹಾಗೆ ತಮಿಳುನಾಡಿನಲ್ಲಿ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾದಾಗಿನಿಂದಲೂ ಬಿಜೆಪಿಗೆ ಹೆಚ್ಚೇನೂ ಲಾಭವಾಗಿಲ್ಲ. ಆದರೆ ಬಿಜೆಪಿ ಪಕ್ಷಕ್ಕೆ ತಮಿಳುನಾಡಿನಲ್ಲಿ ಗಮನಾರ್ಹ ಹೆಸರು ತಂದುಕೊಟ್ಟಿದೆ. ಇದಕ್ಕೆ ಅಣ್ಣಾಮಲೈ ಶ್ರಮ ಪ್ರಮುಖವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಎಐಎಡಿಎಂಕೆ ವಿರುದ್ಧದ ಮಾತುಗಳೇ ಅಣ್ಣಾಮಲೈ ಮುಳುವಾಯಿತೇ?
ಇನ್ನು ಈ ಹಿಂದೆ ಇದೇ ಎಐಎಡಿಎಂಕೆ ಮತ್ತು ಮಾಜಿ ಸಿಎಂ ಜಯಲಲಿತಾ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂದಿಸಿದಂತೆ ಅಣ್ಣಾಮಲೈ ನೀಡಿದ್ದ ಹೇಳಿಕೆ ಬಿಜೆಪಿ ಮತ್ತು ಎಐಎಡಿಎಂಕೆ ವ್ಯಾಪಕ ಸಂಘರ್ಷಕ್ಕೆ ಕಾರಣವಾಗಿತ್ತು. ಬಿಜೆಪಿ ಮತ್ತು ತಮ್ಮನ್ನು ತಮಿಳುನಾಡಿನಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಬಿಂಬಿಸಲು ಪ್ರಯತ್ನಿಸಿದ್ದಾರೆ.
ಇದಕ್ಕಾಗಿ ಎಐಎಡಿಎಂಕೆಗೆ ಕಳಂಕ ಹಚ್ಚಲು ಪ್ರಯತ್ನಿಸಿದ್ದಾರೆ ಎಂದು ಎಐಎಡಿಎಂಕೆ ಆಕ್ರೋಶ ವ್ಯಕ್ತಪಡಿಸಿತ್ತು. ಇದೇ ಕಾರಣಕ್ಕೆ ಎಐಎಡಿಎಂಕೆ ಅಣ್ಣಾಮಲೈ ಇದ್ದರೆ ತಾವು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದ ಷರತ್ತು ವಿಧಿಸಿದ್ದ ಹಿನ್ನಲೆಯಲ್ಲಿ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ತೆಗೆದುಹಾಕಿದೆ ಎಂದು ಹೇಳಲಾಗಿದೆ.
Advertisement