
ಕನೌಜ್: ಹೆಂಡತಿ ಸತ್ತಳೆಂದು ಆಕೆಯ ತಂಗಿಯನ್ನು ಮದುವೆ ಮಾಡಿ ಕೊಟ್ಟರೆ, ಆಕೆಯ 17 ವರ್ಷದ ಮತ್ತೊಬ್ಬ ತಂಗಿಯೂ ಬೇಕು ಎಂದು ಪಟ್ಟು ಹಿಡಿದಿರುವ ವ್ಯಕ್ತಿ ವಿದ್ಯುತ್ ಕಂಬ ಏರಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಉತ್ತರ ಪ್ರದೇಶದ ಕನೌಜ್ನಲ್ಲಿ ಈ ಘಟನೆ ನಡೆದಿದ್ದು, ಹೆಂಡತಿಯ ಮೂರನೇ ತಂಗಿಯನ್ನೂ ತನಗೇ ಮದುವೆ ಮಾಡಿಕೊಡಬೇಕು ಎಂದು ಹಠ ಹಿಡಿದು ವಿದ್ಯುತ್ ಟವರ್ ಏರಿ ಕುಳಿತಿದ್ದಾನೆ.
ಮೂಲಗಳ ಪ್ರಕಾರ ರಾಜ್ ಸಕ್ಸೇನಾ ಎಂಬಾತ ಮೊದಲು 2021 ರಲ್ಲಿ ಒಬ್ಬ ಮಹಿಳೆಯನ್ನು ಮದುವೆಯಾಗಿದ್ದ, ಆದರೆ ಮರು ವರ್ಷವೇ ಆಕೆ ಅನಾರೋಗ್ಯದಿಂದ ನಿಧನಳಾಗಿದ್ದಳು. ನಂತರ ಪೋಷಕರು ಅವಳ ತಂಗಿಯನ್ನು ಈತನಿಗೆ ಮದುವೆ ಮಾಡಿಕೊಟ್ಟರು.
ಈ ಮದುವೆಯಾಗಿ ಎರಡು ವರ್ಷಗಳ ನಂತರ, ಸಕ್ಸೇನಾ ಈಗ ಮತ್ತೊಬ್ಬ 17 ವರ್ಷದ ತಂಗಿಯ ಮೇಲೂ ಕಣ್ಣು ಹಾಕಿದ್ದು, ಆಕೆಯನ್ನೂ ತನಗೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾನೆ. ಮಾತ್ರವಲ್ಲದೇ ಆಕೆಯನ್ನು ಮದುವೆ ಮಾಡಿ ಕೊಡಿ ಎಂದು ಹಠ ಹಿಡಿದು ವಿದ್ಯುತ್ ಟವರ್ ಏರಿದ್ದಾನೆ.
ಗುರುವಾರ ಬೆಳಿಗ್ಗೆ, ರಾಜ್ ಸಕ್ಸೇನಾ ತನ್ನ ಹೆಂಡತಿಗೆ ಅವಳ ಸಹೋದರಿಯನ್ನು ಮದುವೆಯಾಗಲು ಬಯಸುವುದಾಗಿ ಹೇಳಿದ. ಆದರೆ ಆಕೆ ಅದನ್ನು ನಿರಾಕರಿಸಿದಳು. ಈ ವೇಳೆ ಸಕ್ಸೇನಾ ಬಾಲಿವುಡ್ ಚಿತ್ರ "ಶೋಲೆ" ಯ ದೃಶ್ಯದಂತೆ ವಿದ್ಯುತ್ ಟವರ್ ಹತ್ತಿ ತನ್ನ ನಾದಿನಿಯನ್ನು ಮದುವೆ ಕೊಡಬೇಕು. ಇಲ್ಲದಿದ್ದರೆ ಇಲ್ಲಿಂದ ಕೆಳಗೆ ಹಾರುತ್ತೇನೆ ಎಂದು ಕೂಗಲು ಪ್ರಾರಂಭಿಸಿದನು.
ವಿಷಯ ತಿಳಿದ ಪೊಲೀಸರು ಮತ್ತು ಕುಟುಂಬ ಸದಸ್ಯರು ಅವರನ್ನು ಸಮಾಧಾನಪಡಿಸಲು ಸುಮಾರು ಏಳು ಗಂಟೆಗಳ ಕಾಲ ಪ್ರಯತ್ನಿಸಿದ್ದರು. ಆತನ ಬೇಡಿಕೆಗೆ ಒಪ್ಪಿಕೊಂಡ ನಂತರ ಆತ ಕೆಳಗಿಳಿದಿದ್ದಾನೆ. ನಂತರ ವರದಿಗಾರರೊಂದಿಗೆ ಮಾತನಾಡಿದ ಸಕ್ಸೇನಾ, ತನ್ನ ನಾದಿನಿ ಕೂಡ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳಿದ್ದಾನೆ. ಈಗ ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
Advertisement