

ಪಣಜಿ: ಉತ್ತರ ಗೋವಾದ ಅರ್ಪೋರಾದಲ್ಲಿರುವ ರೋಮಿಯೋ ಲೇನ್‌ನ ಪ್ರಸಿದ್ಧ ನೈಟ್‌ಕ್ಲಬ್ ಬಿರ್ಚ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಪ್ರವಾಸಿಗರು ಸೇರರಿ 23 ಮಂದಿ ಸಜೀವದಹನಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ದುರ್ಘಟನೆಯಲ್ಲಿ 50 ಮಂದಿಕ್ಕೂ ಹೆಚ್ಚು ಗಾಯಗೊಂಡಿದ್ದಾರೆಂದು ತಿಳಿದುಬಂದಿದ್ದು, ಎಲ್ಲರೂ ಗೋವಾದ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರಲ್ಲಿ ಮೂರರಿಂದ ನಾಲ್ಕು ಮಂದಿ ಪ್ರವಾಸಿಗರು ಮತ್ತು ಕ್ಲಬ್ನ 19 ಸಿಬ್ಬಂದಿ ಸೇರಿದ್ದಾರೆಂದು ಹೇಳಲಾಗುತ್ತಿದೆ.
ಶನಿವಾರ ತಡರಾತ್ರಿ ಘಟನೆ ಸಂಭವಿಸಿದ್ದು, ಅಡುಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟವಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಇನ್ನೂ ಯಾವುದೇ ದೃಢೀಕರಣಗಳು ಲಭ್ಯವಾಗಿಲ್ಲ.
ಸ್ಫೋಟದ ತೀವ್ರತೆ ಎಷ್ಟು ಪ್ರಬಲವಾಗಿತ್ತೆಂದರೆ, ಬೆಂಕಿಯ ಜ್ವಾಲೆಗಳು ಕೆಲವೇ ಸೆಕೆಂಡುಗಳಲ್ಲಿ ಇಡೀ ಕಟ್ಟಡವನ್ನು ಆವರಿಸಿಕೊಂಡಿತ್ತು. ತಪ್ಪಿಸಿಕೊಳ್ಳಲು ಒಳಗಿರುವವರಿಗೆ ತುಂಬಾ ಕಡಿಮೆ ಸಮಯ ಇತ್ತು ಎನ್ನಲಾಗಿದೆ.
ಈ ನಡುವೆ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಗೊಂಡವರ ಸಂಖ್ಯೆ ಮತ್ತು ಸ್ಥಿತಿಯ ಕುರಿತು ಅಧಿಕೃತ ವಿವರಗಳು ಇನ್ನೂ ಲಭ್ಯವಿಲ್ಲ. ಮೂಲಗಳ ಪ್ರಕಾರ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ ನೈಟ್‌ಕ್ಲಬ್ ಅನ್ನು ಸದ್ಯಕ್ಕೆ ಸೀಲ್ ಮಾಡಲಾಗಿದ್ದು, ಮಾಲೀಕರು ಮತ್ತು ಆಡಳಿತ ಮಂಡಳಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಮೂಲಗಳ ಪ್ರಕಾರ, ಕ್ಲಬ್ ಮಾಲೀಕರು ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಿರಲಿಲ್ಲ ಎನ್ನಲಾಗುತ್ತಿದೆ.
ತನಿಖೆಗೆ ಸಿಎಂ ಆದೇಶ
ಇನ್ನು ದುರ್ಘಟನೆಗೆ ಪ್ರತಿಕ್ರಿಯೆ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಘಟನೆ ಕುರಿತು ತನಿಖೆ ಆದೇಶಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಗೋವಾದಲ್ಲಿ ಇಂದು ನಮಗೆಲ್ಲರಿಗೂ ಅತ್ಯಂತ ನೋವಿನ ದಿನ. ಅರ್ಪೋರಾದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡವು 23 ಜನರನ್ನು ಬಲಿ ತೆಗೆದುಕೊಂಡಿದೆ. ಊಹಿಸಲಾಗದ ನಷ್ಟವಾಗಿದ್ದು, ಘಟನೆ ಕುರಿತು ತೀವ್ರವಾಗಿ ದುಃಖಿತನಾಗಿದ್ದೇನೆ. ಎಲ್ಲಾ ಮೃತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ಘಟನೆಗೆ ನಿಖರವಾದ ಕಾರಣ ಮತ್ತು ಅಗ್ನಿ ಸುರಕ್ಷತಾ ನಿಯಮಗಳು ಮತ್ತು ಕಟ್ಟಡ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ತನಿಖೆಯು ಪರಿಶೀಲಿಸುತ್ತದೆ. ತಪ್ಪಿತಸ್ಥರು ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ. ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
Advertisement