

ಹೈದರಾಬಾದ್: ಹೈದರಾಬಾದದಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ತಾಯಿಯೊಬ್ಬಳು ತಾನೇ ಹೆತ್ತು, ಬೆಳೆಸಿದ ಮಗಳನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಂದಿರುವ ಘಟನೆ ನಡೆದಿದೆ.
ಕುಟುಂಬ ಸದಸ್ಯರೊಂದಿಗೆ ಜಗಳವಾದ ಬಳಿಕ 37 ವರ್ಷದ ಮಹಿಳೆಯೊಬ್ಬರು ಹೈದರಾಬಾದ್‌ನ ವಸತಿ ಕಟ್ಟಡದ ನಾಲ್ಕನೇ ಮಹಡಿಯಿಂದ ಎಂಟು ವರ್ಷದ ಮಗಳನ್ನು ಎಸೆದು ಕೊಂದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಬಾಲಕಿ ಸಾವಿಗೀಡಾಗಿದ್ದಾಳೆ ಎಂದು ಮಲ್ಕಾಜ್‌ಗಿರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾಸಗಿ ಉದ್ಯೋಗಿಯಾಗಿರುವ ಮಹಿಳೆ ಭಾನುವಾರ ರಾತ್ರಿಯಿಂದ ತನ್ನ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದ ನಂತರ ಮಾನಸಿಕವಾಗಿ ಕುಗ್ಗಿಹೋಗಿದ್ದಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸೋಮವಾರ ಕಟ್ಟಡದ ನಾಲ್ಕನೇ ಮಹಡಿಗೆ ಮಗಳನ್ನು ಕರೆದುಕೊಂಡು ಹೋಗಿ ಎಸೆದಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
Advertisement