
ಕರೂರ್: ಕರೂರ್ ಜಿಲ್ಲೆಯ ಕುಳಿತಲೈನಲ್ಲಿರುವ ಸರ್ಕಾರಿ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಪತ್ನಿಯನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಭಾನುವಾರ ನಡೆದಿದೆ.
ಪೊಲೀಸರ ಪ್ರಕಾರ, ಆರೋಪಿಯನ್ನು ಕುಳಿತಲೈ ಬಳಿಯ ಮರುಧೂರ್ ಪಂಚಾಯತ್‌ನ ಪಟ್ಟವರ್ತಿ ಪ್ರದೇಶದ ಕಾರು ಚಾಲಕ ಆರ್ ವಿಶ್ರುತ್ (28) ಎಂದು ಗುರುತಿಸಲಾಗಿದೆ. ಅವರ ಪತ್ನಿ ವಿ ಶ್ರುತಿ (27) ಬೆಂಗಳೂರಿನವರು. ವಿಶ್ರುತ್ ಮತ್ತು ಶ್ರುತಿ ಏಳು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಶನಿವಾರ ರಾತ್ರಿ ಕರೂರಿನ ಅವರ ಮನೆಯಲ್ಲಿ ದಂಪತಿ ನಡುವೆ ಜಗಳ ನಡೆದಿತ್ತು. ಈ ಜಗಳದಲ್ಲಿ, ವಿಶ್ರುತ್ ಶ್ರುತಿಯ ಮೇಲೆ ಹಲ್ಲೆ ನಡೆಸಿದ್ದು, ಆಕೆಗೆ ಗಾಯಗಳಾಗಿವೆ. ನಂತರ ಸ್ಥಳೀಯರು ಚಿಕಿತ್ಸೆಗಾಗಿ ಕುಳಿತಲೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ ಮುಂಜಾನೆ, ವಿಶ್ರುತ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ ಶ್ರುತಿಯ ಕುತ್ತಿಗೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ತೀವ್ರ ಗಾಯಗಳಾಗಿ ಶ್ರುತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.
ಕುಳಿತಲೈ ಡಿಎಸ್ಪಿ ಸೆಂಥಿಲ್‌ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೃತಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ.
ಕುಳಿತಲೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
Advertisement