ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉತ್ತರ ಪ್ರದೇಶ: ಕೇವಲ 800 ರೂ ಶುಲ್ಕ ಕಟ್ಟದಿದ್ದಕ್ಕೆ ಪರೀಕ್ಷೆ ಬರೆಯಲು ಬಿಡದೇ ಅವಮಾನ; ಜೀವ ಕಳೆದುಕೊಂಡ ವಿದ್ಯಾರ್ಥಿನಿ!

ಶಾಲಾ ಆಡಳಿತ ಮಂಡಳಿಯು ಆಕೆಗೆ ಪರೀಕ್ಷೆಗೆ ಹಾಜರಾಗದಂತೆ ತಡೆದಿದ್ದು ಅಲ್ಲದೆ ಶುಲ್ಕ ಪಾವತಿಸದಿದ್ದಕ್ಕಾಗಿ ಅವಮಾನಿಸಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
Published on

ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಾಲಾ ಆಡಳಿತ ಮಂಡಳಿಯು ಆಕೆಗೆ ಪರೀಕ್ಷೆಗೆ ಹಾಜರಾಗದಂತೆ ತಡೆದಿದ್ದು ಅಲ್ಲದೆ ಶುಲ್ಕ ಪಾವತಿಸದಿದ್ದಕ್ಕಾಗಿ ಅವಮಾನಿಸಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಪ್ರತಾಪ್‌ಗಢದ ಕಮಲಾ ಶರಣ್ ಯಾದವ್ ಇಂಟರ್ ಕಾಲೇಜಿನ ವಿದ್ಯಾರ್ಥಿನಿ ರಿಯಾ ಪ್ರಜಾಪತಿ (17) 800 ರೂ. ಬಾಕಿ ಶುಲ್ಕವನ್ನು ಪಾವತಿಸದ ಕಾರಣ ಶಾಲೆಯು ಪ್ರವೇಶ ಪತ್ರವನ್ನು ನಿರಾಕರಿಸಿತು. ಶನಿವಾರ ಪರೀಕ್ಷೆ ಬರೆಯಲು ಶಾಲೆಗೆ ಹೋದಾಗ ಕಾಲೇಜು ವ್ಯವಸ್ಥಾಪಕ ಸಂತೋಷ್ ಕುಮಾರ್ ಯಾದವ್, ಪ್ರಾಂಶುಪಾಲ ರಾಜ್‌ಕುಮಾರ್ ಯಾದವ್, ಉದ್ಯೋಗಿ ದೀಪಕ್ ಸರೋಜ್, ಪಿಯೋನ್ ಧನಿರಾಮ್ ಮತ್ತು ಓರ್ವ ಶಿಕ್ಷಕ ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಇದರಿಂದ ಮನನೊಂದು ವಿದ್ಯಾರ್ಥಿನಿ ಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಶುಲ್ಕ ಪಾವತಿಸದಿದ್ದರೆ ಆಕೆಯ ಭವಿಷ್ಯ ಹಾಳಾಗುತ್ತದೆ ಎಂದು ಶಾಲಾ ಸಿಬ್ಬಂದಿ ಮಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ರಿಯಾಳ ತಾಯಿ ಪೂನಂ ದೇವಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬೆದರಿಕೆ ಮತ್ತು ಅವಮಾನದಿಂದ ನೊಂದು ಮಗಳು ಘೋರ ಕೃತ್ಯಕ್ಕೆ ಮುಂದಾಗಿದ್ದಾಳೆ ಎಂದು ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಪೂರ್ವ) ದುರ್ಗೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
Uttar Pradesh: ಹೆಚ್ಚಿನ ಭದ್ರತೆ ಇದ್ದರೂ ಮಲಗಿದ್ದ Airforce ಮುಖ್ಯ ಎಂಜಿನಿಯರ್‌ಗೆ ಕಿಟಕಿಯಿಂದ ಗುಂಡು ಹಾರಿಸಿ ಹತ್ಯೆ!

X

Advertisement

X
Kannada Prabha
www.kannadaprabha.com