HAL ಸ್ಥಳಾಂತರ ಕೇಳಿಲ್ಲ, ವಿಸ್ತರಿತ ಘಟಕ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದೇವೆ: ಕರ್ನಾಟಕ ತೀಕ್ಷ್ಣ ಪ್ರತಿಕ್ರಿಯೆ ಬೆನ್ನಲ್ಲೇ ಆಂಧ್ರ ಸಿಎಂ ಸ್ಪಷ್ಟನೆ!

ಬೆಂಗಳೂರಿನಲ್ಲಿರುವ ಹೆಚ್‌ಎಎಲ್ ಅನ್ನು ಆಂಧ್ರ ಪ್ರದೇಶಕ್ಕೆ ಸ್ಥಳಾಂತರಿಸಲು ನಾನು ಎಂದಿಗೂ ಕೇಳಿಲ್ಲ. ಇದು ಒಂದು ಬೃಹತ್, ಕಾರ್ಯತಂತ್ರದ ಸೌಲಭ್ಯ, ಅಂತಹ ಸಂಸ್ಥೆಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ ಹಾಗೂ ಸ್ಥಳಾಂತರಿಸಲೂಬಾರದು.
CM Chandrababu Naidu
ಸಿಎಂ ಚಂದ್ರಬಾಬು ನಾಯ್ಡು
Updated on

ಅಮರಾವತಿ: ಬೆಂಗಳೂರಿನ ಹೆಚ್‌ಎಎಲ್ ಯುದ್ಧ ವಿಮಾನ ನಿರ್ಮಾಣ ಘಟಕವನ್ನು ತಮ್ಮ ರಾಜ್ಯಕ್ಕೆ ಕೊಂಡೊಯ್ಯಲು ಆಂಧ್ರ ಸರ್ಕಾರ ದೆಹಲಿ ಮಟ್ಟದಲ್ಲಿ ಭಾರೀ ಲಾಬಿ ನಡೆಸಿದೆ ಎಂಬ ವರದಿಗೆ ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅಂತಹ ಯಾವುದೇ ಯತ್ನ ನಡೆದಿಲ್ಲ ಎಂದು ಸ್ವತಃ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಅಮರಾವತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಬೆಂಗಳೂರಿನಲ್ಲಿರುವ ಹೆಚ್‌ಎಎಲ್ ಅನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲು ನಾನು ಎಂದಿಗೂ ಕೇಳಿಲ್ಲ. ಇದು ಒಂದು ಬೃಹತ್, ಕಾರ್ಯತಂತ್ರದ ಸೌಲಭ್ಯ, ಅಂತಹ ಸಂಸ್ಥೆಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ ಹಾಗೂ ಸ್ಥಳಾಂತರಿಸಲೂಬಾರದು. ನಾನು ಯಾವುದೇ ಯೋಜನೆಯನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಲು ಎಂದಿಗೂ ಪ್ರಯತ್ನಿಸಿಲ್ಲ, ಅಂತಹ ಕಲ್ಪನೆ ನನ್ನ ಇತಿಹಾಸದ ಭಾಗವಲ್ಲ ಎಂದು ಹೇಳಿದರು.

ಕೇಂದ್ರಕ್ಕೆ ನಮ್ಮ ವಿನಂತಿಯು ಆಂಧ್ರಪ್ರದೇಶದಲ್ಲಿ ರಕ್ಷಣಾ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸುವುದು ಮಾತ್ರವೇ ಆಗಿತ್ತು. ಇತರ ರಾಜ್ಯಗಳಿಂದ ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ಸ್ಥಳಾಂತರಿಸುವುದು ಅಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಈ ಹಿಂದೆ ಉತ್ಪಾದನೆ ಮತ್ತು ಇತರ ರಕ್ಷಣಾ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗೆ ಲೇಪಾಕ್ಷಿಯ ಸಾಮರ್ಥ್ಯವನ್ನು ಎತ್ತಿ ತೋರಿಸಿದ್ದೆ. ಆದರೆ, ದುರದೃಷ್ಟವಶಾತ್, ಕರ್ನಾಟಕದ ಕೆಲವು ರಾಜಕಾರಣಿಗಳು ಇದನ್ನು ಹೆಚ್‌ಎಎಲ್ ಅನ್ನು ಆಂಧ್ರಪ್ರದೇಶಕ್ಕೆ ವರ್ಗಾಯಿಸುವ ಪ್ರಯತ್ನ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

CM Chandrababu Naidu
HAL ಸ್ಥಾಪಿಸಿದ್ದು ನೆಹರೂ ಅಲ್ಲ, ಅದು ಮೈಸೂರು ಅರಸರ ಬಳುವಳಿ: ಡಿ.ಕೆ ಶಿವಕುಮಾರ್'ಗೆ ಯದುವೀರ್ ತಿರುಗೇಟು

ತೆಲುಗು ದೇಶಂ ಪಕ್ಷವು ಅಭಿವೃದ್ಧಿಯ ಸಮಾನಾರ್ಥಕವಾಗಿದೆ. ನಾವು ಎಂದಿಗೂ ಪ್ರಗತಿಯನ್ನು ವಿರೋಧಿಸುವುದಿಲ್ಲ, ಅಥವಾ ಇತರ ರಾಜ್ಯಗಳಿಂದ ಯೋಜನೆಗಳನ್ನು ಕಸಿದುಕೊಳ್ಳುವುದರಲ್ಲಿ ನಾವು ನಂಬಿಕೆ ಇಡುವುದಿಲ್ಲ ಎಂದು ತಿಳಿಸಿದರು.

ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ನಾಯ್ಡು ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ನಲ್ಲಿ ಸೌಕರ್ಯದ ಕೊರತೆಯಿದೆ ಎಂಬ ಕಾರಣ ನೀಡಿ, ಎಚ್‌ಎಎಲ್‌ನ ಯುದ್ಧವಿಮಾನ ತಯಾರಿಕಾ ಘಟಕವನ್ನು ತಮ್ಮ ರಾಜ್ಯಕ್ಕೆ ಸ್ಥಳಾಂತರಿಸುವಂತೆ ಲಾಬಿ ನಡೆಸಿದ್ದಾರೆ ಎಂಬ ವಿಚಾರ ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿತ್ತು.

ಡಿ.ಕೆ.ಶಿವಕುಮಾರ್, ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಅನೇಕ ನಾಯಕರು ಈ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ವಿವಾದ ತೀವ್ರವಾಗುತ್ತಿದ್ದಂತೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಕಚೇರಿಯು, ಅಸ್ತಿತ್ವದಲ್ಲಿರುವ ಯಾವುದೇ ಸೌಲಭ್ಯವನ್ನು ಸ್ಥಳಾಂತರಿಸುವ ಪ್ರಸ್ತಾಪವನ್ನು ತಾವು ಕೇಂದ್ರದ ಮುಂದಿಟ್ಟಿಲ್ಲ. ಬೆಂಗಳೂರಿನಲ್ಲಿ ಹೆಚ್ಚುವರಿ ವಿಸ್ತರಿತ ಘಟಕಕ್ಕೆ ಜಾಗ ಇಲ್ಲ ಎಂಬ ಕಾರಣಕ್ಕೆ ನಾವು ಗಡಿ ಪ್ರದೇಶದಲ್ಲಿ ಜಾಗದ ಪ್ರಸ್ತಾಪ ಮಾಡಿದ್ದೆವು ಎಂದು ಸ್ಪಷ್ಟಪಡಿಸಿತ್ತು. ಅದಾದ ಬಳಿಕ ಇದೀಗ ಸ್ವತಃ ಮುಖ್ಯಮಂತ್ರಿ ನಾಯ್ಡು ಅವರೇ ಈ ಸ್ಪಷ್ಟಿಕರಣ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com